ಮಂಡ್ಯ : ಹಿತ್ತಲಗಿಡ ಮದ್ದಲ್ಲ ಎಂಬ ಮಾತಿದೆ. ಆದರೆ, ಕೆಲವೊಂದು ಹಿತ್ತಲ ಗಿಡಗಳು ಮದ್ದಿನ ಜೊತೆಗೆ ಆದಾಯವನ್ನು ತಂದು ಕೊಡುತ್ತದೆ. ಇಲ್ಲೊಂದು ಬೇಲಿ ಗಿಡ ಕೂಡ ಹಾಗೆಯೇ, ಔಷಧೀಯ ಗುಣ ಹೊಂದಿದ್ದು, ಈ ಗಿಡವನ್ನು ವಾಣಿಜ್ಯೀಕರಣ ಮಾಡಿ, ಆದಾಯ ಗಳಿಸಲು ಮುಂದಾಗಿದ್ದಾರೆ ಪ್ರಗತಿಪರ ರೈತ.
ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಸಯ್ಯದ್ ಘನಿ ಖಾನ್ ಬೇಲಿಯಲ್ಲಿ ಬೆಳೆಯುವ ಔಷಧಿಯ ಗುಣವುಳ್ಳ ಪುಂಡೆ ಗಿಡದಿಂದ ಆದಾಯ ಗಳಿಸುವ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಸಾಮಾನ್ಯವಾಗಿ ಈ ಗಿಡವನ್ನು ಬೇಲಿಗಳಲ್ಲಿ ನೋಡಬಹುದು. ಮೂರು ವಿಧಗಳಲ್ಲಿ ಈ ಗಿಡ ಜಮೀನಿನ ಬೇಲಿ, ಹೊಲ ಗದ್ದೆಗಳಲ್ಲಿ ಕಾಣ ಸಿಗುತ್ತದೆ. ಈ ಪುಂಡೆ ಗಿಡವನ್ನು ಇಂಗ್ಲಿಷ್ನಲ್ಲಿ ರೋಸಿಲ್ಲಾ ಎಂದು ಕರೆಯಲಾಗುತ್ತದೆ. ಈ ಗಿಡವನ್ನು ಕೃಷಿ ಮಾದರಿಯಲ್ಲಿ ಬೆಳೆದು ವಾಣಿಜ್ಯ ಬೆಳೆಯನ್ನಾಗಿಸಲು ಮುಂದಾಗಿದ್ದಾರೆ ಸಯ್ಯದ್ ಘನಿ ಖಾನ್.
ರೋಸಿಲಾ ಗಿಡ ಅಪಾರ ಪ್ರಮಾಣದಲ್ಲಿ ವಿಟಮಿನ್ ಸಿ ಹೊಂದಿದೆಯಂತೆ. ಇದರ ಜೊತೆಗೆ ಫ್ರೋಟಿನ್, ಮೆಗ್ನೀಷಿಯಂ, ಪಾಸ್ಪರಸ್, ಐರಾನ್, ಸೋಡಿಯಂ, ಕಾರ್ಬೋಹೈಡ್ರೇಟ್ ಸೇರಿದಂತೆ ಅಪಾರ ಪ್ರಮಾಣದ ಲವಣಗಳನ್ನು ಒಳಗೊಂಡಿದೆ. ಸಿ ವಿಟಮಿನ್ ಹೆಚ್ಚಿಗೆ ಇರುವುದರಿಂದ ಇದರ ಎಲೆಗಳು ಕೊರೊನಾ ಕಾಯಿಲೆ ತಡೆಗಟ್ಟಲು ಬಳಸಬಹುದು ಎಂದು ತಿಳಿಸುತ್ತಾರೆ ಘನಿ ಖಾನ್.
ಈ ಸಸ್ಯದ ಪ್ರತಿಯೊಂದು ಭಾಗವನ್ನೂ ಔಷಧ ಮತ್ತು ಆಹಾರ ವಸ್ತುವಾಗಿ ಬಳಸಬಹುದು. ಇದರ ಎಲೆಯಿಂದ ಚಟ್ನಿ ಹಾಗೂ ಚಟ್ನಿ ಪೌಡರ್ ತಯಾರಿಸಿಬಹುದು. ಹೂವಿನ ಎಸಳಿನಿಂದ ಜಾಮ್, ಉಪ್ಪಿನಕಾಯಿ ಹಾಗೂ ಟೀ ಪೌಡರ್ ಮಾಡಬಹುದು. ಬೀಜದಿಂದ ಪೌಡರ್ ಮಾಡಿ ಆಹಾರ ವಸ್ತುವಾಗಿ ಬಳಸಬಹುದು. ರೈತ ಘನಿ ಖಾನ್ ಮನೆಗೆ ಅತಿಥಿಗಳು ಬಂದರೆ ಕುಂಡೆ ಹೂವಿನ ಟೀ ನೀಡಿ ಉಪಚರಿಸಲಾಗುತ್ತದೆ. ಸ್ವಲ್ಪ ಹುಳಿ ಗುಣ ಹೊಂದಿರುವುದರಿಂದ ಟಮೋಟೊ ಬದಲು ಸಾಂಬಾರಿನ ಪದಾರ್ಥವಾಗಿ ಕೂಡ ಇದನ್ನು ಬಳಸಬಹುದಾಗಿದೆ ಎನ್ನುತ್ತಾರೆ ಘನಿ ಖಾನ್ ಪತ್ನಿ.
ಬೇಲಿ ಗಿಡದ ಔಷಧಿಯ ಗುಣವನ್ನು ಪತ್ತೆ ಮಾಡಿರುವ ಘನಿ ಖಾನ್, ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲು ತೀರ್ಮಾನ ಮಾಡಿದ್ದಾರೆ. ವಿದೇಶದಲ್ಲಿ ಇದಕ್ಕೆ ಬೇಡಿಕೆ ಇದ್ದು, ಸದ್ಯ ಸುಮಾರು 8 ಎಕರೆ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ.