ಮಂಡ್ಯ: ಮ್ಯೂಸಿಯಂ ಮ್ಯಾನ್ ಎಂದೇ ಖ್ಯಾತಿಯಾಗಿರುವ ತಾಲೂಕಿನ ಶಿವಳ್ಳಿ ಗ್ರಾಮದ ಭತ್ತದ ಬೋರೇಗೌಡ ಅವರ ಕೊಡುಗೆ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿರ್ಮಲಾ ಸೀತಾರಾಮನ್ ಅವರು ಇಂಗ್ಲಿಷ್ ಪತ್ರಿಕೆಯೊಂದರ ವರದಿಯ ಲಿಂಕ್ ಅನ್ನು ಹಾಕಿ ‘‘ಸ್ಥಳೀಯ ಪ್ರಭೇದಗಳನ್ನು ಸಂರಕ್ಷಿಸುವಲ್ಲಿ ನನ್ನ ಸಂಕಲ್ಪವಿದೆ ಎಂದು ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಮದ ‘ಮ್ಯೂಸಿಯಂ ಮ್ಯಾನ್’ ಭತ್ತದ ಬೋರೇಗೌಡ ಹೇಳುತ್ತಾರೆ. ಭಾರತದ ಶ್ರೀಮಂತ ಕೃಷಿ ಪರಂಪರೆಗೆ ಸ್ವಯಂ ಪ್ರೇರಿತ ವ್ಯಕ್ತಿಯ ಕೊಡುಗೆಯು ಅನುಕರಣೀಯ ಕಥೆ’’ ಹೀಗೆಂದು ಟ್ವೀಟ್ ಮಾಡಿದ್ದರು.
ತಮ್ಮ ಮನೆಯಲ್ಲಿರುವ ಮ್ಯೂಸಿಯಂನಲ್ಲಿ ಸುಮಾರು 210ಕ್ಕೂ ಹೆಚ್ಚು ಸ್ಥಳೀಯ ಭತ್ತದ ತಳಿಗಳನ್ನು ಹಾಗೂ ವಿವಿಧ ರೀತಿಯ ರಾಗಿ, ನಾಟಿಗೆ ಬಳಸುವ ಮರದ ನೇಗಿಲುಗಳು, ಕುಡುಗೋಲುಗಳು, ಸೇರಿದಂತೆ ಹಳೆಯ ಕೃಷಿ ಉಪಕರಣಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೇ ನಾಟಿ ತಳಿಗಳ ಬಳಸುವ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ನಾಟಿ ತಳಿಯಲ್ಲಿ ಅತಿ ಹೆಚ್ಚು ಪೋಷಕಾಂಶಗಳಿವೆ. ಹೈಬ್ರೀಡ್ ತಳಿಗಳ ಫಸಲಿನಲ್ಲಿ ಇಳುವರಿ ಪ್ರಮಾಣ ಹೆಚ್ಚಿರುತ್ತದೆ. ಆದರೆ, ಗುಣಮಟ್ಟ ಇರುವುದಿಲ್ಲ. ಹಿಂದೆ ಆ ಪ್ರದೇಶದಲ್ಲಿ ಹೊಂದಿಕೊಂಡ ತಳಿ ಬೆಳೆಯುತ್ತಾ ಆರೋಗ್ಯದಿಂದ ಇರುತ್ತಿದ್ದರು.
ಹೈಬ್ರೀಡ್ ತಳಿಗಳ ಬಳಕೆಯಿಂದ ಈಗ ರೋಗ ನಿರೋಧಕ ಶಕ್ತಿ ಕುಂದುತ್ತಿದೆ. ದೇಶಿಯ ತಳಿಗಳನ್ನು ಸಾವಯವವಾಗಿ ಬೆಳೆದರೆ ಮಾತ್ರ ರೋಗ ನಿರೋಧ ಹೆಚ್ಚುತ್ತದೆ. ನನ್ನ ಮ್ಯೂಸಿಯಂ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವುದು ಸಂತಸ ತಂದಿದೆ ಎಂದು ಶಿವಳ್ಳಿಯ ಭತ್ತದ ಬೋರೇಗೌಡ ಹೇಳಿದರು.