ಮಂಡ್ಯ: ಮನ್ಮುಲ್ನಲ್ಲಿ ನಡೆದಿರುವ ಕಲಬೆರಕೆ ಹಾಲು ಹಗರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮನ್ಮುಲ್ ವ್ಯಾಪ್ತಿಯ ಜಿಲ್ಲೆಯ ಮದ್ದೂರು ತಾಲೂಕು ಗೆಜ್ಜಲಗೆರೆಯಲ್ಲಿ ಹಾಲಿಗೆ ನೀರು ಮಿಶ್ರಣ ಮಾಡುತ್ತಿದ್ದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು.
ಗೆಜ್ಜಲಗೆರೆ ಡೇರಿಯಲ್ಲಿ ನೀರು ಮಿಶ್ರಿತ ಹಾಲು ಬರುವಂತೆ ಟ್ಯಾಂಕರ್ ವಿನ್ಯಾಸಗೊಳಿಸಿದ್ದ ವಿಷಯ ಬಯಲಾಗಿತ್ತು. ಟ್ಯಾಂಕರ್ ಒಳಭಾಗದಲ್ಲಿ ನೀರು ತುಂಬಲು ಪ್ರತ್ಯೇಕ ಜಾಗವನ್ನು ಮಾಡಿದ್ದರು. ಈ ಬಗ್ಗೆ ಅನುಮಾನಗೊಂಡು ಒಕ್ಕೂಟದ ಅಧ್ಯಕ್ಷ ರಾಮಚಂದ್ರು ನೇತೃತ್ವದಲ್ಲಿ ತಪಾಸಣೆ ನಡೆಸಿದಾಗ ಕಲಬೆರಕೆ ಮಾಡುತ್ತಿದ್ದ ವಿಷಯ ಗೊತ್ತಾಗಿತ್ತು.
ಹಾಲಿಗೆ ನೀರು ಕಲಬೆರಕೆ ಮಾಡಲು ರೂಪಿಸಿದ್ದ ವಿಧಾನ ನೋಡಿದ ಹಾಲು ಒಕ್ಕೂಟದ ಆಡಳಿತ ಮಂಡಳಿ ಶಾಕ್ ಆಗಿತ್ತು. ವಂಚನೆ ಮಾಡಲು ಬಳಸುತ್ತಿದ್ದ 6 ಹಾಲಿನ ಟ್ಯಾಂಕರ್ಗಳನ್ನು ವಶಕ್ಕೆ ಪಡೆದ ಮದ್ದೂರು ಪೊಲೀಸರು ತನಿಖೆ ನಡೆಸಿದ್ದರು. ಈದೀಗ ಸಿಎಂ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದ್ದಾರೆ.
ಹಾಲಿಗೆ ನೀರು ಸೇರಿಸಿ ವಂಚಿಸಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಪೌರಾಡಳಿತ ಸಚಿವ ನಾರಾಯಣ ಗೌಡ ಡೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಿಎಂಗೆ ಮಾಹಿತಿ ನೀಡಿದ್ದರು.
ಅಧಿಕಾರಿಗಳು ಅಮಾನತು:
ಕಲಬೆರಕೆ ಹಾಲು ಹಗರಣ ಸಂಬಂಧ ಮದ್ದೂರು ಉಪಕಚೇರಿಯ ಉಪ ವ್ಯವಸ್ಥಾಪಕರಾದ ಮರಿರಾಚಯ್ಯ, ಭರತ್‌ರಾಜ್, ರಾಮಕೃಷ್ಣಯ್ಯ, ವಿಸ್ತರಣಾಧಿಕಾರಿಗಳಾದ ಮಧುಕುಮಾರ್, ರಮೇಶ್ ಕುಮಾರ್, ಟ್ರಾನ್ಸ್‌ಪೋರ್ಟ್ ವಿಭಾಗದ ಡಾ. ವೆಂಕಟೇಶ್ ಸೇರಿದಂತೆ ಅಧಿಕಾರಿಗಳನ್ನು ಅಮಾನತುಗೊಳಿಸಿ ಕೆಎಂಎಫ್ ಆದೇಶ ಹೊರಡಿಸಿದೆ.
ಕೆಎಂಎಫ್‌ನಿಂದ ಆಗಮಿಸಿದ್ದ ಅಧಿಕಾರಿಗಳ ತಂಡ ನಡೆಸಿದ ಆಂತರಿಕ ತನಿಖೆ ಆಧರಿಸಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಅಧಿಕಾರಿಗಳನ್ನು ಕರ್ತವ್ಯಲೋಪವೆಸಗಿದರೆಂಬ ಆರೋಪದ ಮೇಲೆ ಅಮಾನತು ಮಾಡಲಾಗಿದೆ.
ಓದಿ : ಕಲಬೆರಕೆ ಹಾಲು ಹಗರಣ: ಮಂಡ್ಯ ಹಾಲು ಒಕ್ಕೂಟದಿಂದ ಏಳು ಅಧಿಕಾರಿಗಳ ಅಮಾನತು