ಮಂಡ್ಯ: ಮಧ್ಯಪ್ರದೇಶದ ವಿಕಾಸದ ಜೊತೆಗೆ ದೇಶದಲ್ಲಿ ಕೊರೊನಾ ಮುಕ್ತವಾಗಲು ಹಾಗೂ ನಮ್ಮ ಪ್ರೀತಿಯ ಜನತೆಯ ಕಲ್ಯಾಣಕ್ಕೆ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಹೇಳಿದ್ದಾರೆ.
ಪಾಂಡವಪುರ ತಾಲೂಕಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿ ಹಾಗೂ ಯೋಗ ನರಸಿಂಹಸ್ವಾಮಿ ದೇವಾಲಯಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ದೇಶ ಇಂದು ಕೊರೊನಾ ಸಂಕಷ್ಟದಲ್ಲಿದೆ. ಒಂದು ಕಡೆ ಕೊರೊನಾ ಇದ್ರೆ, ಮತ್ತೊಂದು ಕಡೆ ಗಡಿಯಲ್ಲಿ ಯುದ್ಧದ ಆಹ್ವಾನ ಇದೆ. ನಮ್ಮ ಯಶಸ್ವಿ ಪ್ರಧಾನಿ ನೇತೃತ್ವದಲ್ಲಿ ಕೊರೊನಾ ವಿರುದ್ಧ ಹೋರಾಟ ನಡೆಯುತ್ತಿದೆ. ಜೊತೆಗೆ ಸೇನೆ ನಮ್ಮ ಗಡಿಯನ್ನು ಕೂಡ ರಕ್ಷಣೆ ಮಾಡ್ತಿದೆ ಎಂದರು.
ನಮ್ಮ ಪ್ರಧಾನ ಮಂತ್ರಿ ಓರ್ವ ಅದ್ಭುತ ನಾಯಕರು. ಕೊರೊನಾ ವಿರುದ್ಧ ಸಮರ್ಥ ನಾಯಕತ್ವ ಪ್ರದರ್ಶಿಸಿದ್ದಾರೆ. ಇದರಲ್ಲಿ ನಮ್ಮಂತಹ ಕಾರ್ಯಕರ್ತರ ಕರ್ತವ್ಯವೂ ಇದೆ. ನಮ್ಮ ನಮ್ಮ ರಾಜ್ಯಗಳಲ್ಲಿ ಉತ್ತಮ ಕೆಲಸ ಮಾಡಿ ಕೊರೊನಾ ಸಮಾಪ್ತಿಗೆ ಪ್ರಯತ್ನಿಸಬೇಕಿದೆ. ಅದು ಹೇಗೆಂದರೆ ನಮ್ಮ ಸೈನಿಕರು ಶತ್ರುಗಳ ಕತ್ತು ಸೀಳಿದ ಹಾಗೆ ಎಂದರು.
ಇಂದಿನ ಭಾರತ 1960ರ ಭಾರತ ಅಲ್ಲ. ಇಂದಿನ ಭಾರತ ಸಂಪನ್ನ, ಗೌರವ, ಸಮೃದ್ಧ ಹಾಗೂ ಸಶಕ್ತ ಭಾರತವಾಗಿ ನಿರ್ಮಾಣವಾಗಿದೆ. ಇದಕ್ಕಾಗಿ ನಾವೆಲ್ಲರು ಶ್ರಮಿಸಬೇಕಿದೆ ಎಂದರು.
ಇಲ್ಲಿನ ರಾಮಾನುಜಾಚಾರ್ಯರು ಸಾವಿರಾರು ವರ್ಷಗಳ ಹಿಂದೆ ಏಕತೆಯ ಸಂದೇಶ ಸಾರಿದ್ದಾರೆ. ಅವರು ಎಲ್ಲರೂ ಒಂದೇ ಎಂದು ಹೇಳಿದ್ದಾರೆ. ಆ ಸಂದೇಶದಂತೆ ನಾವೆಲ್ಲರೂ ಭಾರತದಲ್ಲಿ ಇರಬೇಕಿದೆ. ನಾವೆಲ್ಲರು ಒಂದೇ ಎನ್ನುವಂತೆ ದೇಶದಲ್ಲಿ ಜಾತಿ ಭೇದ ಬಿಟ್ಟು ಬಾಳಬೇಕಿದೆ ಎಂದರು.