ಮಂಡ್ಯ/ಬೆಂಗಳೂರು: ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಜಿಲ್ಲೆಯ ಹಿರಿಯ ರಾಜಕಾರಣಿ, ಕಾವೇರಿ ಹೋರಾಟಗಾರ, ಮಾಜಿ ಶಾಸಕ ಹೆಚ್.ಡಿ.ಚೌಡಯ್ಯ (94) ನಿಧನ ಹೊಂದಿದ್ದಾರೆ.
ಮಂಗಳವಾರ ತಡರಾತ್ರಿ ಮಂಡ್ಯದ ಹೊಳಲು ಗ್ರಾಮದ ನಿವಾಸದಲ್ಲಿ ಚೌಡಯ್ಯ ಇಹಲೋಕ ತ್ಯಜಿಸಿದರು. ಇವರು ನಾಲ್ಕು ಬಾರಿ ಮಂಡ್ಯದ ಕೆರಗೋಡು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, 2 ಸಲ ವಿಧಾನ ಪರಿಷತ್ ಸದಸ್ಯರಾಗಿದ್ದರು. ಮಂಡ್ಯದ ಪಿ.ಇ.ಟಿ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷರೂ ಆಗಿದ್ದರು.
ಚೌಡಯ್ಯನವರು ಮಂಡ್ಯದ ಮಾದೇಗೌಡ, ಶಂಕರೇಗೌಡ, ಎಸ್.ಎಂ.ಕೃಷ್ಣ, ಸಿಂಗಾರಿಗೌಡರ ಸಮಕಾಲೀನರಾಗಿದ್ದವರು. ದಿ.ಮಾದೇಗೌಡರೊಂದಿಗೆ ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದರು.
ಹೆಚ್.ಡಿ.ಕುಮಾರಸ್ವಾಮಿ ಸಂತಾಪ: ನಾಲ್ಕು ಅವಧಿಗೆ ಶಾಸಕರು, ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ಚೌಡಯ್ಯನವರು ಆದರ್ಶ ಜನಪ್ರತಿನಿಧಿ ಆಗಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಎಣೆ ಇಲ್ಲದಷ್ಟು ಸೇವೆ ಸಲ್ಲಿಸಿದ್ದರು. ಹೆಚ್.ಡಿ.ಚೌಡಯ್ಯ ಅವರ ಅಗಲಿಕೆಯೊಂದಿಗೆ ಒಬ್ಬ ಪ್ರಾಮಾಣಿಕ, ಸೇವಾತತ್ಪರ, ನಿಸ್ವಾರ್ಥ ರಾಜಕಾರಣದ ಕೊಂಡಿಯೊಂದು ಕಳಚಿದಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರು ಹಾಗೂ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಹೆಚ್‌ಡಿಕೆ ಟ್ವೀಟ್ ಮಾಡಿದ್ದಾರೆ.