ಮಂಡ್ಯ: ಸುಮಾರು 5 ಸಾವಿರ ಜನ ನನ್ನ ಆಸ್ತಿ ಘೋಷಣೆ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಅವರೆಲ್ಲರೂ ಏನೇನು ಮಾಡುತ್ತಿದ್ದಾರೆ ಎಂಬುವುದು ನನಗೆ ಗೊತ್ತು. ಹೀಗಾಗಿ ಡಿ.ಕೆ ಸುರೇಶ್ ಅವರಿಂದ ಮತ್ತೊಂದು ನಾಮಪತ್ರ ಸಲ್ಲಿಕೆ ಮಾಡಿಸಿದ್ದೇವೆ. ನಮಗೆ ನಮ್ಮದೇ ಆದ ತಂತ್ರಗಾರಿಕೆ ಇದೆ ಎಂದು ಹೇಳಿದರು.
ಕನಕಪುರದಲ್ಲಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಂಡ್ಯದ ತೂಬಿನಕೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಡಿ.ಕೆ.ಸುರೇಶ್ ಯಾಕೆ ನಾಮಪತ್ರ ಸಲ್ಲಿಸಬಾರದು?. ನಮ್ಮದು ರಾಜಕೀಯ ಲೆಕ್ಕಾಚಾರ ಇರುತ್ತದೆ. ನಮ್ಮ ಗುಟ್ಟನ್ನು ನಾವು ಹೇಳಲ್ಲ. ನಾಡಿದ್ದು ಎಲ್ಲಾ ಗೊತ್ತಾಗುತ್ತದೆ. ನಮಗೂ ರಾಜಕೀಯ ಬರುತ್ತದೆ. ನನ್ನ ಆಸ್ತಿ ಪಟ್ಟಿಯನ್ನು 5 ಸಾವಿರ ಜನ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದರಲ್ಲಿ ಬಿಜೆಪಿ ಕುತಂತ್ರವಿದೆ ಎಂದು ಡಿಕೆಶಿ ದೂರಿದರು.
ಡಿಕೆಶಿ ಆಸ್ತಿ ಎಷ್ಟಿದೆ?: ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಒಟ್ಟು 1,414 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ 108 ಪುಟಗಳಲ್ಲಿ ಶಿವಕುಮಾರ್ ಆಸ್ತಿ ವಿವರ ನೀಡಿದ್ದಾರೆ. ಡಿಕೆಶಿ ಅವರ ವೈಯಕ್ತಿಕ ಆಸ್ತಿಯೇ ₹1,214 ಕೋಟಿ ದಾಟಿದೆ. ಅವರ ಪತ್ನಿ ಉಷಾ 133 ಕೋಟಿ ಹಾಗೂ ಪುತ್ರ ಆಕಾಶ್ ₹66 ಕೋಟಿ ಆಸ್ತಿ ಹೊಂದಿರುವುದು ಅಫಿಡವಿಟ್ನಲ್ಲಿದೆ.
ಡಿಕೆಶಿ ಬಳಿ ₹970 ಕೋಟಿ ಸ್ಥಿರಾಸ್ತಿ, ₹244 ಕೋಟಿ ಚರಾಸ್ತಿ ಇದ್ದು, ₹226 ಕೋಟಿ ಸಾಲ ಹೊಂದಿದ್ದಾರೆ. ₹23 ಲಕ್ಷ ಮೌಲ್ಯದ ಯೂಬ್ಲೆಟ್ ವಾಚ್ ಹೊಂದಿದ್ದು, ಸದ್ಯ ವರ್ಷಕ್ಕೆ ₹14 ಕೋಟಿ ಆದಾಯ ಗಳಿಸುತ್ತಿದ್ದಾರೆ. ಕುಟುಂಬದವರಲ್ಲಿ 4 ಕೆ.ಜಿ.ಯಷ್ಟು ಚಿನ್ನಾಭರಣಗಳಿವೆ. 2013ರಲ್ಲಿ ಡಿಕೆಶಿ ಕುಟುಂಬದ ಆದಾಯವು ₹252 ಕೋಟಿ ಇತ್ತು. ಅದು 2018ರಲ್ಲಿ ₹840 ಕೋಟಿಗೆ ಏರಿಕೆ ಆಗಿತ್ತು.
ಕನಕಪುರದಲ್ಲಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ನಿನ್ನೆ(ಏ.20) ಡಿ.ಕೆ.ಸುರೇಶ್ ಅವರು ಕನಕಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಏಪ್ರಿಲ್ 17 ರಂದು ಡಿ.ಕೆ.ಶಿವಕುಮಾರ್ ಅವರು ಕೂಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಕನಕಪುರದಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ ಅವರ ನಾಮಪತ್ರ ತಿರಸ್ಕೃತಗೊಳ್ಳುವ ಮಾತುಗಳು ಕೇಳಿಬಂದಿದ್ದು, ಮುನ್ನೆಚ್ಚರಿಕೆ ವಹಿಸಿ ಸಹೋದರ ಡಿ.ಕೆ.ಸುರೇಶ್ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ನಾಮಪತ್ರಕ್ಕೆ ತಕರಾರಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಆಸ್ತಿ ವಿವರಕ್ಕೆ ಸಂಬಂಧಿಸಿದಂತೆ ಕೆಲವರಿಂದ ಸಮಸ್ಯೆ ಉದ್ಭವವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆಪ್ತರು ಹಾಗು ಕಾನೂನು ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕನಕಪುರ ವಿಧನಾಸಭಾ ಕ್ಷೇತ್ರದಿಂದ ಡಿಕೆಶಿ ಪುತ್ರಿ ಐಶ್ವರ್ಯ ಹೆಸರು ಕೂಡಾ ಕೇಳಿ ಬರುತ್ತಿತ್ತು. ಕಳೆದ ನಾಲ್ಕು ತಿಂಗಳಿಂದ ಹೆಸರು ಚಾಲ್ತಿಯಲ್ಲಿತ್ತು. ಇದೀಗ ಡಿ.ಕೆ.ಸುರೇಶ್ ಅವರಿಂದ ನಾಮಪತ್ರ ಸಲ್ಲಿಕೆ ಮಾಡಿಸಲಾಗಿದೆ.
ಕನಕಪುರದಿಂದ ಸ್ಪರ್ಧೆ ಮಾಡೋದಕ್ಕೆ ಹೈಕಮಾಂಡ್ ಸೂಚನೆ ನೀಡಿತ್ತು. ಕೆಲವೊಂದು ಕುತಂತ್ರಗಳು ನಡೀತಿವೆ ಎಂದು ಗೊತ್ತಾಗ್ತಿದೆ. ಮುಂಜಾಗ್ರತಾ ಕ್ರಮವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ ಎಂದು ಕನಕಪುರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಸಂಸದ ಡಿ.ಕೆ.ಸುರೇಶ್ ಹೇಳಿದ್ದರು. ಡಿ.ಕೆ.ಶಿವಕುಮಾರ್ ಅವರ ಮೇಲೆ ಸಾಕಷ್ಟು ಕಣ್ಣುಗಳು ಬಿದ್ದಿವೆ. ವಾಮಮಾರ್ಗದಿಂದ ಡಿಕೆಶಿಯನ್ನು ಮಣಿಸಲು ಬಿಜೆಪಿ ಪ್ಲಾನ್ ಮಾಡಿದೆ. ಡಿಕೆಶಿಯನ್ನು ಬಂಧಿಸುವುದು, ನೋಟಿಸ್ ನೀಡೋದು ನೀವೆಲ್ಲಾ ನೋಡಿದ್ದೀರಿ. ನಾಲ್ಕು ದಿನದ ಹಿಂದೆ ಕೂಡ ಚೆನ್ನೈಯಿಂದ ಐಟಿ ಅವರು ನೋಟಿಸ್ ನೀಡಿದ್ದರು. ಖುದ್ದು ನೀವೇ ಹಾಜರಾಗಬೇಕು ಎಂದು ಹೇಳಿದ್ದಾರೆ. ಚುನಾವಣೆ ಆದ ಮೇಲೆ ನಾವು ಬರ್ತೇವೆ ಎಂದು ಹೇಳಿದ್ದೇವೆ. ಅನಾವಶ್ಯಕವಾಗಿ ನಾವು ಬರೋದಿಲ್ಲ ಎಂದು ಹೇಳಿದ್ದೇವೆ. ನಮ್ಮ ಮೇಲಿನ ಕೇಸ್ಗಳ ಮೇಲೆ ಎಲ್ಲ ಕಡೆ ತಡೆಯಾಜ್ಞೆಗಳಿವೆ. ಅಧಿಕಾರ ದುರುಪಯೋಗಪಡಿಸಿಕೊಂಡು ಡಿಕೆಶಿಯನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಕನಕಪುರದಲ್ಲಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ: ಅಚ್ಚರಿಗೆ ಕಾರಣವಾದ ಕಾಂಗ್ರೆಸ್ ನಡೆ