ಗಂಗಾವತಿ: ಪತಿ, ಅತ್ತೆ, ಮಾವ ಸೇರಿದಂತೆ ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಗೃಹಣಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಆನೆಗೊಂದಿ ಗ್ರಾಮದ ಶೃತಿ ಮಂಜುನಾಥ ಕಟ್ಟಿಗಿ (29) ಎಂದು ಗುರುತಿಸಲಾಗಿದೆ. ಗ್ರಾಮದ ಮಂಜುನಾಥ ಎಂಬ ಯುವಕನೊಂದಿಗೆ ಒಂದೂವರೆ ವರ್ಷದ ಹಿಂದಷ್ಟೆ ಶೃತಿ ಹಸೆಮಣೆ ಏರಿದ್ದಳು. ಆದರೆ ಆರಂಭದ ಮೂರು ತಿಂಗಳು ಗಂಡ ಹಾಗೂ ಆತನ ಮನೆಯವರು ಚೆನ್ನಾಗಿ ನೋಡಿಕೊಂಡಿದ್ದು, ಬಳಿಕ ವರದಕ್ಷಿಣೆ ತರುವಂತೆ ಹಿಂಸೆ ನೀಡುತ್ತಿದ್ದರು ಎಂದು ಮಗಳು ಆಗಾಗ ಹೇಳುತ್ತಿದ್ದಳಂತೆ. ಈಗಾಗಲೇ ಮೂರು ನಾಲ್ಕು ಬಾರಿ ರಾಜಿ ಪಂಚಾಯಿತಿ ಮಾಡಲಾಗಿತ್ತು ಎಂದು ಮೃತಳ ತಂದೆ ರೇವಣಪ್ಪ ಬಾಗಲಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮೃತಳ ತಂದೆ ನೀಡಿದ ದೂರಿನ ಮೇರೆಗೆ ಗಂಡ ಮಂಜುನಾಥ, ಮಾವ ಭೀಮಪ್ಪ, ಅತ್ತೆ ಅಲಮೇಲಮ್ಮ, ಮೈದುನ ಹನುಮೇಶ, ನಾದಿನಿಯರಾದ ಲಕ್ಷ್ಮಿಬಸವರಾಜ ಹೊಸಪೇಟೆ ಹಾಗೂ ಜ್ಯೋತಿ ಬಸವರಾಜ ಕಾರಟಗಿ ಎಂಬುವವರ ಮೇಲೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.