ಗಂಗಾವತಿ : ತಾಲೂಕಿನ ಬಂಡಿಬಸಪ್ಪ ಕ್ಯಾಂಪಿನ ಸಮುದಾಯದ ರುದ್ರಭೂಮಿಯನ್ನು ಕೆಲವರು ಅತಿಕ್ರಮಣ ಮಾಡುತ್ತಿರುವುದರ ವಿರುದ್ಧ ಸ್ವತಃ ಗ್ರಾಮದ ಮಹಿಳೆಯರೇ ನೇತೃತ್ವವಹಿಸಿ ಪ್ರತಿಭಟನೆಗೆ ಮುಂದಾದ ಘಟನೆ ನಡೆಯಿತು.
ಗ್ರಾಮದ ನೂರಾರು ಮಹಿಳೆಯರು ಸಾಮೂಹಿಕವಾಗಿ ಆಗಮಿಸಿ ರುದ್ರಭೂಮಿಯಲ್ಲಿ ಕುಳಿತು ಸುಮಾರು ನಾಲ್ಕು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಸಾಕಷ್ಟು ಮುಂಚಿತವಾಗಿ ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಸ್ಪಂದನೆ ಸಿಗಲಿಲ್ಲ. ಈ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕ ಪರಣ್ಣ ಮುನವಳ್ಳಿ ಸ್ಥಳಕ್ಕೆ ಆಗಮಿಸಿ ಮಹಿಳೆಯರಿಂದ ಅಹವಾಲು ಸ್ವೀಕರಿಸಿದರು. ಕೇವಲ ಎರಡು ದಿನದಲ್ಲಿ ರುದ್ರಭೂಮಿಯನ್ನು ಅಳತೆ ಮಾಡಿಸಿ ಹದ್ದುಬಸ್ತ್ ಮಾಡಿಕೊಡಲಾಗುವುದು ಎಂದು ಶಾಸಕ ಮಹಿಳೆಯರಿಗೆ ಭರವಸೆ ನೀಡಿದರು.
ಬಳಿಕ ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಶಾಸಕ, ಅಕ್ರಮಕ್ಕೆ ಯತ್ನಿಸಿದವರ ಮೇಲೆ ಕ್ರಮಕೈಗೊಳ್ಳಬೇಕು. ಅಗೆದು ಹಾಳು ಮಾಡಿರುವ ಭೂಮಿಯನ್ನು ಸಮತಟ್ಟು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.