ಕೊಪ್ಪಳ: ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕ ಬಲಿಯಾಗಿದ್ದಾನೆ ಎಂದು ಆರೋಪಿಸಿ ರೊಚ್ಚಿಗೆದ್ದ ಬಾಲಕನ ಸಂಬಂಧಿಕರು ಸರ್ಕಾರಿ ಆಸ್ಪತ್ರೆಯ ಕಿಟಕಿ, ಬಾಗಿಲುಗಳನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ನಡೆದಿದೆ. ಕನಕಗಿರಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ಬಣ್ಣದ ಓಕುಳಿ ಹಿನ್ನೆಲೆಯಲ್ಲಿ ಕನಕಗಿರಿ ಪಟ್ಟಣದ ಮೂರ್ತಿ ಹಾಗೂ ಶಿವು ಎಂಬುವವರು ಕೆರೆಯಲ್ಲಿ ಈಜಲು ಹೋಗಿದ್ದರು. ಈಜು ಬಾರದ ಹಿನ್ನೆಲೆಯಲ್ಲಿ ಯುವಕ ಶಿವು ಹಾಗೂ ಬಾಲಕ ಮೂರ್ತಿ ಕೆರೆಯಲ್ಲಿ ಮುಳುಗಿದ್ದಾರೆ. ಘಟನೆಯಲ್ಲಿ ಶಿವು ಸಾವನ್ನಪ್ಪಿದ್ದ. ಬಾಲಕ ಮೂರ್ತಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ. ಆ ಬಾಲಕನನ್ನು ಚಿಕಿತ್ಸೆಗಾಗಿ ಕನಕಗಿರಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತರಲಾಗಿತ್ತು. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲು ವೈದ್ಯರೇ ಇರಲಿಲ್ಲ ಎನ್ನಲಾಗ್ತಿದೆ.
ಸುಮಾರು ಎರಡು ಗಂಟೆಯಾದರೂ ಸಹ ವೈದ್ಯರು ಬಾರದ ಹಿನ್ನೆಲೆ 13 ವರ್ಷದ ಬಾಲಕ ಮೂರ್ತಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾನೆ. ಬಾಲಕನ ಸಾವಿನ ಬಳಿಕ ಆಕ್ರೋಶಗೊಂಡ ಸಂಬಂಧಿಕರು ಸಮುದಾಯ ಆರೋಗ್ಯ ಕೇಂದ್ರದಲ್ಲಿದ್ದ ಖುರ್ಚಿ ತೂರಾಡಿ ಗಲಾಟೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕನಕಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.