ಕುಷ್ಟಗಿ/ಕೊಪ್ಪಳ : ತಾಲೂಕಿನ ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿರುವ 41 ಕೆರೆ ಮತ್ತು ಜಿ.ಪಂ. ವ್ಯಾಪ್ತಿಯಲ್ಲಿನ 7 ಕೆರೆಗಳ ವಾಸ್ತವ ಸ್ಥಿತಿ-ಗತಿ, ಕೆರೆ ಒತ್ತುವರಿ ಬಗ್ಗೆ ವರದಿ ನೀಡಬೇಕೆಂದು ತಹಶೀಲ್ದಾರ್ ಎಂ.ಸಿದ್ದೇಶ ಸೂಚಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ತಾಲೂಕಿನ ಬಹುತೇಕ ಕೆರೆಗಳು ಮಾಲೀಕರ ಹೆಸರಲ್ಲಿವೆ. ಅಂತಹ ಕೆರೆಗಳನ್ನು ಗುರುತಿಸಿ ಇಂದೀಕರಣ ( ಅಪ್ಡೇಟಿಂಗ್ -ನವೀಕರಣ ) ಮಾಡುವಂತೆ ಸೂಚಿಸಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ 7 ಕೆರೆಗಳಿದ್ದು, 3 ಪಹಣಿ ಇಂದೀಕರಣವಾಗಿದೆ. ಇನ್ನುಳಿದ ಕೆರೆಗಳ ದಾಖಲೆಗಳ ವಿವರಗಳನ್ನು ಕ್ರೋಢಿಕರಿಸಿ ಪಹಣಿ ಇಂದೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯತ್ ರಾಜ್ ಇಂಜಿನೀಯರಿಂಗ್ ಉಪ ವಿಭಾಗದ ಬಸವರಾಜ್ ಸಜ್ಜನ್ ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯ ಜೆಇ ರಾಜಶೇಖರ್ ಕಟ್ಟಿಮನಿ ಮಾತನಾಡಿ, 41 ಕೆರೆಗಳ ಪೈಕಿ 15 ಕೆರೆಗಳ ಇಂದೀಕರಣವಾಗಿದೆ. ಇನ್ನುಳಿದ ಕೆರೆಗಳ ಇಂದೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ವೇಳೆ, ಭೂ ದಾಖಲೆಗಳ ಅಧಿಕಾರಿ ಈರಣ್ಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.