ಕುಷ್ಟಗಿ(ಕೊಪ್ಪಳ): ಕುಷ್ಟಗಿ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ರೋಗಿಗಳು ಸಕಾಲಿಕ ಸೇವೆ ಸಿಗದೆ ಪರದಾಡಿದ ಪ್ರಸಂಗ ನಡೆಯಿತು.
ಇಂದು ಬೆಳಗಿನಿಂದ ಸೇವಾ ನಿರತ ವೈದ್ಯರು ನಿಗದಿತ ಸಮಯಕ್ಕೆ ಹಾಜರಾಗದೇ 11.30 ಗಂಟೆಯಾದರೂ ಆಸ್ಪತ್ರೆಗೆ ಬರಲಿಲ್ಲ. ಚಿಕಿತ್ಸೆಗಾಗಿ ಬಂದ ರೋಗಿಗಳು ತಾಸುಗಟ್ಟಲೆ ಕುಳಿತರೂ ವೈದ್ಯರು ಆಗಮಿಸಲಿರಲಿಲ್ಲ. ಕೇವಲ ಡಾ.ಕಾಪ್ಸೆ ಮಾತ್ರ ಸೇವೆಯಲ್ಲಿದ್ದು ಡಾ.ಚಂದ್ರಕಲಾ, ಡಾ.ಶರಣಮ್ಮ ಸೇವೆಯಲ್ಲಿರುವುದು ಕಂಡು ಬರಲಿಲ್ಲ.
ಓಪಿಡಿ, ಎಮರ್ಜೆನ್ಸಿ ವಾರ್ಡ್ ವೈದ್ಯರಿಲ್ಲದೇ ಭಣಗುಡುತ್ತಿರುವುದು ಕಂಡು ಬಂತು. ಮಾತ್ರೆ, ಔಷಧಿ ವಿತರಣೆ ಸಿಬ್ಬಂದಿ ಆಗಮಿಸಿರಲಿಲ್ಲ. ಈ ಸಿಬ್ಬಂದಿ ಸಮಸಯಕ್ಕೆ ಸರಿಯಾಗಿ ಬಾರದಿರುವುದು ಈ ಆಸ್ಪತ್ರೆಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ವಾಸ್ತವ ಸ್ಥಿತಿ ತೆರೆದಿಟ್ಟಿದೆ.
ಸೇವೆಯಲ್ಲಿರುವ ಮುಖ್ಯ ವೈದ್ಯಾಧಿಕಾರಿ ಡಾ. ಚಂದ್ರಕಾಂತ ಮಂತ್ರಿ ತಮ್ಮ ಸಹದ್ಯೋಗಿ, ಸಿಬ್ಬಂದಿ ಹಿಡಿತ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯ ಬಸವರಾಜ ಗಾಣಗೇರ ಆರೋಪಿಸಿದರು.
ಓ.ಪಿ.ಡಿ.ಯಲ್ಲಿ ರೋಗಿಗಳ ಚೀಟಿ ಮಾಡಿಕೊಳ್ಳಲಾಗುತ್ತಿತ್ತೇ ವಿನಃ ವೈದ್ಯರು ಈಗ ಬರುವರು ಎಂಬ ಸಿದ್ದ ಉತ್ತರ ಸಿಗುತ್ತಿತ್ತು. ರೋಗಿಗಳು ವೈದ್ಯರ ಬರುವಿಕೆಗೆ ಕಾದು ಸುಸ್ತಾಗಿರುವುದು ಕಂಡು ಬಂತು.
ಈ ಕುರಿತು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಚಂದ್ರಕಾಂತ ಮಂತ್ರಿ ಅವರನ್ನು ವಿಚಾರಿಸಿದಾಗ, ಸೆಪ್ಟೆಂಬರ್ 15ರಿಂದ ವೈದ್ಯರು ಮುಷ್ಕರ ನಿರತರಾಗುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸಭೆಗೆ ಹಾಜರಾಗಲು ಕೊಪ್ಪಳಕ್ಕೆ ತೆರಳಿದ್ದೇವೆ. ಡಾ.ಶರಣಮ್ಮ, ಡಾ.ಚಂದ್ರಕಲಾ ಲೇಬರ್ ರೂಮ್, ಆಪರೇಷನ್ ಥಿಯೇಟರ್ನಲ್ಲಿರಬಹುದು ಅವರನ್ನು ವಿಚಾರಿಸುವುದಾಗಿ ಹೇಳಿದರು.
ಕೋವಿಡ್ ಆಸ್ಪತ್ರೆಯೂ ಈ ಆಸ್ಪತ್ರೆಗೆ ಹೊಂದಿಕೊಂಡಿದ್ದು, ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದು ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗುವ ಸಾಧ್ಯತೆಗಳಿವೆ. ಇದು ಚಿಕಿತ್ಸೆ ಪಡೆಯುವ ಒಳ ರೋಗಿಗಳಿಗೆ, ಹೊರ ರೋಗಿಗಳಿಗೆ ಆತಂಕ ಉಂಟುಮಾಡಿದೆ.