ಕೊಪ್ಪಳ: ಜಿಲ್ಲೆಗೆ ಮಂಜೂರಾಗಿರುವ ನೂತನ ವಿಶ್ವವಿದ್ಯಾಲಯವನ್ನು ಬೇರೆ ಕಡೆ ಹಸ್ತಾಂತರಿಸಲು ಬಿಡುವುದಿಲ್ಲ, ಜಿಲ್ಲಾ ಕೇಂದ್ರದಲ್ಲಿಯೇ ನೂತನ ವಿವಿ ಆರಂಭವಾಗಲಿದೆ ಎಂದು ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ವಿವಿಯನ್ನು ಜಿಲ್ಲಾ ಕೇಂದ್ರದಲ್ಲಿಯೇ ಸ್ಥಾಪಿಸಬೇಕು ಎಂದು ರಾಜ್ಯಪತ್ರದಲ್ಲಿಯೇ ಇದೆ. ಬೇರೆ ಕಡೆ ಹಸ್ತಾಂತರ ಮಾಡುವ ಗುಮಾನಿ ಇದ್ದು, ಈ ಕುರಿತು ಸಂಸದ ಸಂಗಣ್ಣ, ಎಂಎಲ್ಸಿ ಹೇಮಲತಾರೊಂದಿಗೆ ಚರ್ಚಿಸಿದ್ದೇನೆ. ವಿವಿ ಸ್ಥಾಪನೆಗೆ ಜಿಲ್ಲಾ ಕೇಂದ್ರದಲ್ಲಿಯೇ ಮೂರು ನಾಲ್ಕು ಕಡೆಗಳಲ್ಲಿ ಜಾಗ ಹುಡುಕಾಟ ನಡೆಸಿದ್ದೇವೆ ಎಂದರು.
ಜಿಲ್ಲೆ ಮಾತ್ರವಲ್ಲದೇ ರಾಜ್ಯಾದ್ಯಂತ ವಿಪರೀತ ಮಳೆ ಸುರಿದಿದ್ದು, ಬಹಳಷ್ಟು ಹಾನಿ ಉಂಟಾಗಿದ್ದು, ರಸ್ತೆಗಳು ಹಾನಿಯಾಗಿವೆ. ಪ್ರತಿ ಕಿಲೋಮೀಟರ್ ರಸ್ತೆ ದುರಸ್ತಿಗೆ 60 ಸಾವಿರ ರೂಪಾಯಿ ನೀಡುತ್ತೇವೆ. ಬಹಳಷ್ಟು ಹಾನಿಯಾಗಿದ್ದರೇ 1 ಲಕ್ಷ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಆದರೆ, ಇಷ್ಟು ಹಣ ಸಾಕಾಗುವುದಿಲ್ಲ ಎಂದು ಹೇಳಿದ್ದೇವೆ. ಈ ಕುರಿತು ಅನುದಾನ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬಳಿಯೇ ಜಮೀನು ಗುರುತಿಸಿದ್ದೇವೆ. ಭೂ ಸ್ವಾಧೀನ ಮಾಡಿಕೊಳ್ಳಬೇಕಾಗಿದೆ. ಅಂಜನಾದ್ರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ರೈತರ ಹೊಲಗಳನ್ನು ಖರೀದಿಸುವ ಸಾಧ್ಯವಾಗಿಲ್ಲ. ಆದರೆ, ಸರ್ಕಾರದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು, ಅಡಿಗಲ್ಲು ಹಾಕುತ್ತೇವೆ. ಈ ಮೂಲಕ ಕಾಮಗಾರಿ ಆರಂಭಿಸುತ್ತೇವೆ ಎಂದರು.
ಹಂಪಿ ಮತ್ತು ಆನೆಗೊಂದಿ ಎರಡು ಉತ್ಸವಗಳನ್ನು ಮಾಡುತ್ತೇವೆ, ಎರಡು ಉತ್ಸವಗಳನ್ನು ಬೇರೆ ಬೇರೆ ದಿನಾಂಕಗಳಲ್ಲಿ ಮಾಡಲಾಗುತ್ತದೆ. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ, ದಿನಾಂಕ ನಿಗದಿ ಪಡಿಸುತ್ತೇವೆ ಎಂದರು. ಜಿಲ್ಲಾಡಳಿತ ದಿಂದ ಜಿಲ್ಲಾ ರಜತ ಮಹೋತ್ಸವವನ್ನು ಆಚರಿಸುತ್ತೇವೆ.
ಇದಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಒದಗಿಸಲಾಗುತ್ತದೆ. ವಿಮಾನ ನಿಲ್ದಾಣಕ್ಕೆ ನಗರದ ಕುಷ್ಟಗಿ ರಸ್ತೆಯ ತಾಳಕನಕಾಪುರ ಬಳಿಯ ಜಾಗವೂ ಸೂಕ್ತವಾಗಿದ್ದು, ಭೂ ಸ್ವಾಧೀನ ಮಾಡಬೇಕಿದೆ. ಯಾವ ಅನುದಾನದಲ್ಲಿ ಭೂ ಸ್ವಾಧೀನ ಮಾಡಬೇಕು ಎನ್ನುವ ಬಗ್ಗೆ ಮುಂದಿನ ಹಂತದಲ್ಲಿ ಚರ್ಚಿಸಬೇಕಿದೆ ಎಂದರು.