ಕೊಪ್ಪಳ : ಸಿದ್ದರಾಮಯ್ಯ ಅವರು ಮುಂದಿನ ಸಿಎಂ ಆಗಬೇಕು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜನಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಇದೆ. ಜಮೀರ್ ಅಹ್ಮದ್ ಒಬ್ಬರೇ ಅಲ್ಲ, ಎಲ್ಲ ಮುಖಂಡರು ಸಿದ್ದರಾಮಯ್ಯ ಅವರೇ ಸಿಎಂ ಆಗಬೇಕು ಎಂಬ ಅಭಿಪ್ರಾಯ ನೀಡಿದ್ದಾರೆ ಎಂದು ಹಿಟ್ನಾಳ್ ಹೇಳಿದರು.
ಓದಿ: ಪಿಕಪ್ ವಾಹನ ಗುದ್ದಿ ಕರು ಸಾವು.. ಕರುಳು ಹಿಂಡುವಂತಿದೆ ತಾಯಿ ಹಸುವಿನ ಮೂಕರೋದನ
ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದರೆ ಪೂರಕ ಕಾರ್ಯಕ್ರಮ ರೂಪಿಸುತ್ತಿದ್ದರು. ಹೀಗಾಗಿ, ಸಿದ್ದರಾಮಯ್ಯ ಸಿಎಂ ಆಗಿಲ್ಲವಲ್ಲ ಎಂಬುದು ಜನ ಸಾಮಾನ್ಯರಿಗೆ ಕೊರಗಿದೆ.
ಡಿ ಕೆ ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿ ವ್ಯಕ್ತಿ ಪೂಜೆ ಬೇಡವೆಂದು ಹೇಳಿದ್ದಾರೆ. ಪಕ್ಷದ ಅಧ್ಯಕ್ಷರಾಗಿ, ಪಕ್ಷದ ಹಿತದೃಷ್ಟಿಯಿಂದ ಡಿ.ಕೆ.ಶಿವಕುಮಾರ್ ಆ ರೀತಿ ಹೇಳಿದ್ದಾರೆ. ಪಕ್ಷ ಒಂದು ಕಡೆ, ನಾಯಕತ್ವ ಒಂದು ಕಡೆ. ರಾಜ್ಯಕ್ಕೆ ಮರಳಿ ಒಳ್ಳೆಯ ಯೋಜನೆಗಳು ಬರಬೇಕು ಅಂದರೆ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಬೇಕು ಎಂದರು.
ರಾಜ್ಯದಲ್ಲಿ ಮತ್ತೆ ಪ್ರವಾಹ ಆರಂಭವಾಗಿದ್ದು, ಬಿಜೆಪಿಯವರು ತಮ್ಮ ಆಂತರಿಕ ಗೊಂದಲ ಬಿಟ್ಟು ಕೆಲಸ ಮಾಡಬೇಕು. ನಾಯಕತ್ವ ಕುರಿತು ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಎಂಬುದು ನನಗೆ 200 ರಷ್ಟು ನಂಬಿಕೆ ಇದೆ. ನಾಳೆ ಸಿದ್ದರಾಮಯ್ಯ ಅವರು ಕೊಪ್ಪಳ ಮತ್ತು ಯಲಬುರ್ಗಾಕ್ಕೆ ಆಗಮಿಸಲಿದ್ದಾರೆ.
ಸಿದ್ದರಾಮಯ್ಯ ನಾಳೆ ಗವಿಸಿದ್ದೇಶ್ವರ ಮಠ ಹಾಗೂ ಇಂದಿರಾ ಕ್ಯಾಂಟೀನ್‌ಗೆ ಭೇಟಿ ಮಾಡಲಿದ್ದಾರೆ. ಅಲ್ಲದೆ ಕೊಪ್ಪಳದಲ್ಲಿ 15 ಸಾವಿರ ಹಾಗೂ ಯಲಬುರ್ಗಾದಲ್ಲಿ 10 ಸಾವಿರ ಕಿಟ್ ವಿತರಣೆ ಮಾಡಲಿದ್ದಾರೆ. ಕೋವಿಡ್ ನಿಯಮಾವಳಿ ಪ್ರಕಾರ ನಾಳೆ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಇದೇ ಸಂದರ್ಭದಲ್ಲಿ ಹೇಳಿದರು.