ಕೊಪ್ಪಳ: ಡಿಸಿಎಂ ಲಕ್ಷ್ಮಣ ಸವದಿ ಅವರು ಸದನದಲ್ಲಿ ಬ್ಲೂ ಫಿಲ್ಮ್ ನೋಡಿದ್ದು ದೇಶದ್ರೋಹದಂಥ ಅಪರಾಧವಲ್ಲ ಎಂದು ಹೇಳಿದ್ದ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಯೂಟರ್ನ್ ಹೊಡೆದಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿಯನ್ನು ನಾನು ಸಮರ್ಥನೆ ಮಾಡಿಕೊಂಡಿಲ್ಲ. ಸಮರ್ಥನೆ ಮಾಡಿಕೊಳ್ಳುವ ಜಾಯಮಾನದವನೂ ನಾನಲ್ಲ. ಆದರೆ, ಸವದಿ ಮಾಡಿದ್ದು ತಪ್ಪು. ಒಂದು ತಪ್ಪಿಗೆ ಅನೇಕಬಾರಿ ಶಿಕ್ಷೆ ಕೊಡೋದು ಯಾವ ಕಾನೂನಿನಲ್ಲೂ ಇಲ್ಲ. ಸಿದ್ದರಾಮಯ್ಯ ಪದೇ ಪದೇ ಅದನ್ನೇ ಮಾತಾನಾಡುತ್ತಿರೋದು ತಪ್ಪು ಎಂದು ಹೇಳಿದ್ದೆ. ಸದನಲ್ಲಿ ಸವದಿ ಬ್ಲೂಫಿಲಂ ನೋಡಿದ್ದು ಆಕಸ್ಮಿಕ ಘಟನೆ. ಆದರೆ, ಅದನ್ನು ಮನುಷ್ಯತ್ವ ಇರುವವರು, ಸದನದ ಬಗ್ಗೆ ಗೌರವ ಇರುವವರು ಯಾರೂ ಒಪ್ಪಿಕೊಳ್ಳುವುದಿಲ್ಲ ಎಂದರು.
ಸವದಿಗೆ ಅವತ್ತೆ ಶಿಕ್ಷೆಯಾಗಿದೆ. ಹೀಗಾಗಿ, ಅದು ದೇಶದ್ರೋಹವಲ್ಲ ಎಂದು ನಾನು ಹೇಳಿದ್ದೆ. ಆದರೆ, ಸವದಿಗೆ ಶಿಕ್ಷೆಯಾದ ಮೇಲೂ ಸಿದ್ಧರಾಮಯ್ಯ ಪದೇಪದೇ ಅದನ್ನೇ ಮಾತಾಡ್ತಾರೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಪ್ರಶ್ನೆ ಮಾಡಿದರು.
ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಡಿಕೆ ಶಿವಕುಮಾರ್ ಅವರನ್ನು ಇಡಿ ಬಂಧಿಸಿದೆ. ಅಂದಮೇಲೆ ಈ ವಿಷಯದಲ್ಲಿ ನಮ್ಮ ಪಾತ್ರ ಇನ್ನೂ ಆರಂಭವಾಗಿಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ತಾಲೂಕಿನ ಕೋಳೂರು ಬಳಿಯ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಡಿಕೆಶಿಯನ್ನು ತಪ್ಪಿತಸ್ಥ ಎಂದು ಒಳಗೆ ಹಾಕಿಲ್ಲ. ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಬಂಧಿಸಿದ್ದಾರೆ. ಇನ್ನೂ ನಮ್ಮ ಪಾತ್ರ ಆರಂಭವಾಗಿಲ್ಲ ಎಂದು ಹೇಳಿದರು. ಡಿಕೆಶಿ ಬಂಧನ ಯಾವುದೇ ಧರ್ಮಕ್ಕೆ, ಜಾತಿಗೆ ಸಂಬಂಧಿಸಿದ್ದಲ್ಲ. ಅಧಿಕಾರಿಗಳ ಬಳಿ ಮಾಹಿತಿ ಇದೆ. ಹೀಗಾಗಿ, ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗ ಸಮುದಾಯ ನಡೆಸುವ ಪ್ರತಿಭಟನೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.