ಕೊಪ್ಪಳ: ಹಣ್ಣುಗಳ ರಾಜ ಮಾವಿನ ಹಣ್ಣುಗಳನ್ನ ನೆನಪಿಸಿಕೊಂಡರೆ ಸಾಕು ಬಾಯಲ್ಲಿ ನೀರೂರುತ್ತದೆ. ಮಾರುಕಟ್ಟೆಗೆ ಮಾವು ಒಂದಿಷ್ಟು ತಡವಾಗಿ ಬಂದಿದೆಯಾದರೂ, ಮಾವು ಪ್ರಿಯರ ಬಾಯಲ್ಲಿ ನೀರೂರಿಸುವಂತಹ ಬಗೆಬಗೆಯ ಮಾವುಗಳು ಕೊಪ್ಪಳ ನಗರದಲ್ಲಿ ಈಗ ಒಂದೇ ಸೂರಿನಡಿ ಸಿಗುತ್ತಿವೆ.
ಹೌದು, ನಗರದ ತೋಟಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿ ಇಂದಿನಿಂದ ಮಾವು ಮೇಳ ಆರಂಭವಾಗಿದೆ. ಮೇ 15 ರವರೆಗೆ, ಅಂದರೆ ಸುಮಾರು ಎಂಟು ದಿನಗಳ ಕಾಲ ಇಲ್ಲಿ ತೋಟಗಾರಿಕೆ ಇಲಾಖೆಯು ಮಾವು ಮೇಳ ಆಯೋಜಿಸಿದೆ. ಈ ಮಾವು ಮೇಳದಲ್ಲಿ ನಾನಾ ಬಗೆಯ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದ್ದು, ಇದು ಮಾವು ಪ್ರಿಯರ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ.
ಮಾವು ಮೇಳದಲ್ಲಿ ಸುಮಾರು 20 ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿದ್ದು, ಈ ಮಳಿಗೆಗಳ ಮೂಲಕ ಗ್ರಾಹಕರು ನೇರವಾಗಿ ರೈತರಿಂದ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ಸುಮಾರು ನೂರು ಬಗೆಯ ಮಾವಿನ ಹಣ್ಣುಗಳ ಪ್ರದರ್ಶನ ನಡೆಯುತ್ತಿದ್ದು, ಮಾರಾಟಕ್ಕೆ ಲಭ್ಯವಿರುವ ಮಾವಿನ ಹಣ್ಣುಗಳು ಬಾಯಲ್ಲಿ ನೀರೂರಿಸಿ, ಜನರನ್ನು ಕೈಬೀಸಿ ಕರೆಯುತ್ತಿವೆ.
ಪ್ರಮುಖವಾಗಿ ಮಲಗೋಬಾ, ತೋತಾಪುರಿ, ರಸಪೂರಿ, ಮಲ್ಲಿಕಾ, ಆಪೋಸ್, ಬೆನೆಷಾನ್, ಕೇಸರಿ, ದಶಾಹರಿ, ಸುವರ್ಣರೇಖಾ, ಇಮಾಮ್ ಪಸಂದ್ ತಳಿಯ ಮಾವಿನ ಹಣ್ಣುಗಳು ಈ ಮಾವು ಮೇಳದಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ.
ಇನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ಮಾವಿನ ಹಣ್ಣುಗಳ ಮಾರಾಟ ನಡೆಯುತ್ತಿದ್ದು, ಇದು ರೈತರು ಹಾಗೂ ಗ್ರಾಹಕರಿಗೂ ಒಳ್ಳೆಯ ಚಾನ್ಸ್. 40 ರುಪಾಯಿಯಿಂದ 90 ರೂಪಾಯಿಗೆ ಪ್ರತಿ ಕೆಜಿ ಮಾವು ದೊರೆಯುತ್ತಿದೆ. ಯಾವುದೇ ರಾಸಾಯನಿಕ ಬಳಸದೆ ಕೇವಲ ನೈಸರ್ಗಿಕವಾಗಿ ಬೆಳೆದ ಹಣ್ಣುಗಳು ಮಾರಾಟಕ್ಕಿಡಲಾಗಿದೆ. ಇದು ಗ್ರಾಹಕರ ಖುಷಿಗೆ ಮತ್ತೊಂದು ಕಾರಣವಾಗಿದೆ.
ಮಧ್ಯವರ್ತಿಗಳ ಹಾವಳಿ ಇಲ್ಲದೆ ಗ್ರಾಹಕರ ಮತ್ತು ರೈತರ ನಡುವೆ ಸಂಪರ್ಕ ಕೊಂಡಿಯಾಗಿ ಮಾವು ಮೇಳ ಕೆಲಸ ಮಾಡುತ್ತಿದ್ದು, ನೈಸರ್ಗಿಕ ಹಣ್ಣುಗಳ ಮಾರಾಟ ಗಮನ ಸೆಳೆಯುತ್ತಿದೆ. ಕಳೆದ ವರ್ಷ ಸುಮಾರು ಎರಡು ಕೋಟಿ ರೂಪಾಯಿಯಷ್ಟು ವ್ಯವಹಾರ ನಡೆದಿತ್ತು. ಈ ಬಾರಿ ಅನ್ ಸೀಸನ್ ಆಗಿರುವುದರಿಂದ ಕನಿಷ್ಠ ಒಂದು ಕೋಟಿ ರೂಪಾಯಿ ಆದರೂ ವ್ಯವಹಾರ ನಡೆಯುತ್ತದೆ ಎಂಬ ನಿರೀಕ್ಷೆಯನ್ನು ತೋಟಗಾರಿಕೆ ಇಲಾಖೆ ಹೊಂದಿದೆ. ಎಂಟು ದಿನಗಳ ಕಾಲ ನಡೆಯಲಿರುವ ಈ ಮಾವು ಮೇಳ ಮಾವು ಪ್ರಿಯರಿಗೆ ಮಾವಿನ ರುಚಿಯುಣಿಸಲಿದೆ.