ಗಂಗಾವತಿ: ಕೊರೊನಾ ಸೋಂಕು ಪೀಡಿತ ನಗರದ ಶಿಕ್ಷಕಿಯೊಬ್ಬರು ಚಿಕಿತ್ಸೆ ಫಲಕಾರಿಯಾಗಿದೆ ಕೊಪ್ಪಳದ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಶಿಕ್ಷಕಿಯನ್ನು ಲಕ್ಷ್ಮೀ ದೇವಿ (50) ಎಂದು ಗುರುತಿಸಲಾಗಿದೆ.
ನಗರದ ಹಿರೇಜಂತಕಲ್ ಪ್ರದೇಶದ ನಿವಾಸಿಯಾಗಿರುವ ಲಕ್ಷ್ಮೀ ದೇವಿ ಹನುಮನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ನಿತ್ಯ ಗಂಗಾವತಿಯಿಂದ ಹನುಮನಹಳ್ಳಿಗೆ ಹೋಗಿ ಬಂದು ಮಾಡುತ್ತಿದ್ದರು. ಕಳೆದ ಹದಿನೈದು ದಿನಗಳ ಹಿಂದೆ ಕೊರೊನಾದ ಪ್ರಾಥಮಿಕ ಲಕ್ಷಣ ಕಂಡು ಬಂದಿತ್ತು. ಹೀಗಾಗಿ ಶಿಕ್ಷಕಿಯನ್ನು ಕೊಪ್ಪಳದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದೀರ್ಘಕಾಲದ ಚಿಕಿತ್ಸೆಯ ಮಧ್ಯೆಯೂ ಶಿಕ್ಷಕಿಯ ಆರೋಗ್ಯ ಸುಧಾರಿಸದೆ ಸಾವನ್ನಪ್ಪಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
ಶಿಕ್ಷಕಿ ಮೂಲತಃ ಕೊಪ್ಪಳ ನಗರದವರಾಗಿದ್ದು, ಕೆಲಸದ ನಿಮಿತ್ತ ಗಂಗಾವತಿಯಲ್ಲಿ ವಾಸವಾಗಿದ್ದರು. ಕಳೆದ 15 ದಿನಗಳ ಹಿಂದೆ ಬೆಂಗಳೂರಿನಲ್ಲಿ ಮೆಡಿಕಲ್ ಚೆಕಪ್ಗೆ ಹೋದಾಗ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದೆ. ಕೂಡಲೇ ಕೊಪ್ಪಳದ ಕೋವಿಡ್ ಆಸ್ಪತ್ರೆಗೆ ಶಿಕ್ಷಕಿ ದಾಖಲಾಗಿದ್ದರು.