ನವದೆಹಲಿ: ದೇಶದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಮತ್ತು ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಉದ್ಯಮಿ ಗೌತಮ್ ಅದಾನಿ ವಿರುದ್ಧದ ಆರೋಪ ಈಗ ಅನಾಮಧೇಯವಾಗಿದೆ. ಸೌರಶಕ್ತಿ ಯೋಜನೆಯಲ್ಲಿ ಅದಾನಿ ಗ್ರೂಪ್ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿ ಅಮೆರಿಕ ತನ್ನದೇ ಕೋರ್ಟ್ಗೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಲೋಪವಿದೆ ಎಂದು ಸುಪ್ರೀಂಕೋರ್ಟ್ ಹಿರಿಯ ವಕೀಲ ಮತ್ತು ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಬುಧವಾರ ಹೇಳಿದ್ದಾರೆ.
ಅಮೆರಿಕದ ದೋಷಾರೋಪ ಪಟ್ಟಿ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಅಮೆರಿಕದ ಪ್ರಾಸಿಕ್ಯೂಟರ್‌ಗಳು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಅಣ್ಣನ ಮಗ ಸಾಗರ್ ಅದಾನಿ ಅವರ ಹೆಸರಿಲ್ಲ. ಅವರು ಹೇಗೆ, ಯಾರಿಗೆ ಲಂಚ ನೀಡಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ ಎಂದಿದ್ದಾರೆ.
ಲಂಚ ನೀಡಿದ, ಪಡೆದವರ ಹೆಸರಿಲ್ಲ: ಅದಾನಿಗಳ ವಿರುದ್ಧ ಅಮೆರಿಕವು ಎಫ್‌ಸಿಪಿಎ ಉಲ್ಲಂಘನೆ ಆರೋಪ ಮಾಡಿಲ್ಲ. ಭಾರತೀಯ ಯಾವ ಅಧಿಕಾರಿ, ಇಲಾಖೆಗೆ ಸೌರ ವಿದ್ಯುತ್ ಒಪ್ಪಂದಕ್ಕಾಗಿ ಲಂಚ ನೀಡಿದ್ದಾರೆ ಎಂಬುದನ್ನೂ ಉಲ್ಲೇಖಿಸಿಲ್ಲ. ಲಂಚ ನೀಡಿರುವ ಮತ್ತು ಪಡೆದಿರುವ ಅಧಿಕಾರಿಗಳ ಒಂದೇ ಒಂದು ಹೆಸರು ದೋಷಾರೋಪ ಪಟ್ಟಿಯಲ್ಲಿ ಇಲ್ಲ ಎಂದು ರೋಹಟಗಿ ಸ್ಪಷ್ಟಪಡಿಸಿದ್ದಾರೆ.
ಚಾರ್ಜ್ಶೀಟ್ನಲ್ಲಿ ಐದು ಆರೋಪಗಳನ್ನು ಮಾಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಹೆಸರನ್ನು ಅವರೇ ಲಂಚ ನೀಡಿದ್ದಾರೆ ಎಂಬುದನ್ನು ಎಲ್ಲೂ ಉಲ್ಲೇಖಿಸಿಲ್ಲ. ಐದನೇ ಆರೋಪದಲ್ಲಿ ಲಂಚ ಪಡೆದುಕೊಂಡ ಅಧಿಕಾರಿಗಳ ಹೆಸರನ್ನೂ ನಮೂದಿಸಿಲ್ಲ. ಇದು ವ್ಯಕ್ತಿಗತವಾಗಿ ಮಾಡಲಾದ ಆರೋಪ ಎಂದು ಅವರು ಹೇಳಿದರು.
ಇನ್ನೊಂದೆಡೆ, ಅಮೆರಿಕದ ವಿದೇಶಿ ಭ್ರಷ್ಟ ನಿಯಮಗಳ ಕಾಯ್ದೆಯನ್ನು ಉಲ್ಲಂಘಿಸುವ ಪಿತೂರಿ ನಡೆಯುತ್ತಿದೆ ಎಂದು ಮೊದಲು ಆರೋಪಿಸಲಾಗಿದೆ. ಅದರಲ್ಲಿ ಅದಾನಿಗಳ ಹೆಸರೇ ಇಲ್ಲ. ನ್ಯಾಯಕ್ಕೆ ಅಡ್ಡಿ ಎಂಬ ಇನ್ನೊಂದು ಆರೋಪದಲ್ಲಿ ಅದಾನಿ ಸೇರಿ ಅಧಿಕಾರಿಗಳ ಹೆಸರಿಲ್ಲ. ಚಾರ್ಜ್ಶೀಟ್ನಲ್ಲಿ ಆರೋಪಿಗಳು ಮತ್ತು ಎಸಗಿದ ಕೃತ್ಯವನ್ನು ನಿಖರವಾಗಿ ನಮೂದು ಮಾಡಬೇಕು. ಅದ್ಯಾವುದು ಇದರಲ್ಲಿ ಕಾಣುತ್ತಿಲ್ಲ ಎಂದು ಮುಕುಲ್ ರೋಹಟಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಮೆರಿಕದ ಆರೋಪವೇನು? ಸೌರಶಕ್ತಿ ಯೋಜನೆಯ ಗುತ್ತಿಗೆಯನ್ನು ಸಲೀಸಾಗಿ ಪಡೆದುಕೊಳ್ಳಲು ಅದಾನಿ ಗ್ರೂಪ್ ಭಾರತೀಯ ಅಧಿಕಾರಿಗಳಿಗೆ 2100 ಕೋಟಿ ರೂಪಾಯಿ ನೀಡಿದೆ ಎಂದು ಅಮೆರಿಕ ಆರೋಪ ಮಾಡಿದೆ. ಪ್ರಾಸಿಕ್ಯೂಷನ್ ಕೋರ್ಟ್ಗೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದೆ.
ಇದನ್ನೂ ಓದಿ: ಸೌರಶಕ್ತಿ ಯೋಜನೆಗೆ ಲಂಚ ನೀಡಿಲ್ಲ, ಆರೋಪದ ವಿರುದ್ಧ ಕಾನೂನು ಹೋರಾಟ: ಅದಾನಿ ಗ್ರೂಪ್