ಕುಷ್ಟಗಿ: ಕೋವಿಡ್-19 ನಿಯಂತ್ರಣದ ಹಿನ್ನೆಲೆ ಚೆಕ್ ಪೋಸ್ಟ್ನಲ್ಲಿ ಹೊರ ರಾಜ್ಯ, ಜಿಲ್ಲೆಗಳಿಂದ ತಾಲೂಕಿನ ಹಾಗೂ ಕೊಪ್ಪಳ ಜಿಲ್ಲೆಯ ಇತರಡೆಯ ಜನರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದೆ ಎಂದು ತಹಶೀಲ್ದಾರ್ ಎಂ. ಸಿದ್ದೇಶ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ಯ ರಾಜ್ಯ, ಜಿಲ್ಲೆಯವರು ನಮ್ಮ ತಾಲೂಕು, ಜಿಲ್ಲೆಗೆ ಬಸ್, ಖಾಸಗಿ ವಾಹನಗಳಲ್ಲಿ ಆಗಮಿಸುವವರನ್ನು ಕಡ್ಡಾಯವಾಗಿ ತಪಾಸಣೆ ಮಾಡಿಸಲಾಗುವುದು. ಕೊರೊನಾ ಸೊಂಕಿನ ಲಕ್ಷಣ ಕಂಡು ಬಂದಲ್ಲಿ ವೈರಸ್ ಲಕ್ಷಣ ಆಧರಿಸಿ ಕ್ವಾರಂಟೈನ್ ಆಗುವವರೆಗೆ ಕೈಗೆ ಕ್ವಾರಂಟೈನ್ ಸೀಲ್ ಹಾಕಿ ನಿಗಾ ವಹಿಸಲಾಗುವುದು.
ಈಗಾಗಲೇ ಗೋವಾ, ಮೈಸೂರಿನಿಂದ ತಲಾ ಮೂವರಿಗೆ ಕ್ವಾರಂಟೈನ್ ಸೀಲ್ ಹಾಕಲಾಗಿದೆ ಎಂದರು. ಕಾಸರಗೋಡಿನಿಂದ ಶಾಖಾಪುರದ ನಾಲ್ವರು, ಮನ್ನೆರಾಳದ ಒಬ್ಬರನ್ನು ನಿಡಶೇಸಿ ದೇಸಾಯಿ ವಸತಿ ನಿಲಯದಲ್ಲಿ ಸೀಲ್ ಹಾಕಿ, ಕ್ವಾರಂಟೈನ್ನಲ್ಲಿರಿಸಲಾಗಿದೆ ಎಂದು ಮಾಹಿತಿ ನೀಡಿದರು.