ಕೊಪ್ಪಳ: ನಾನು ಸಾಂವಿಧಾನಿಕ ಹುದ್ದೆಯಲ್ಲಿ ಇರುವುದರಿಂದ ರಾಜಕಾರಣರ ಬಗ್ಗೆ ಮಾತನಾಡಬಾರದು. ಆದರೂ ಸಹ ಪಕ್ಷಾತೀತವಾಗಿ ಹೇಳುವುದಾದರೆ ಇಂದಿನ ರಾಜಕಾರಣದ ಬಗ್ಗೆ ನನಗೆ ಖಂಡಿತವಾಗಿಯೂ ತೃಪ್ತಿ ಇಲ್ಲವೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕಾರಣದ ಬಗ್ಗೆ ನಾನು ಮಾತನಾಡುವುದಿಲ್ಲ. ಇಂದಿನ ರಾಜಕಾರಣ ಕೇವಲ ಆರೋಪ-ಪ್ರತ್ಯಾರೋಪದ ಮೇಲೆ ನಡೆಯುತ್ತಿದೆ. ಟೀಕೆ-ಟಿಪ್ಪಣಿಗಳು ಜನರ ಒಳಿತಿನ ವಿಚಾರವಾಗಿ ನಡೆಯಬೇಕು. ಎಲ್ಲಾ ಪಕ್ಷದವರು ಕೇವಲ ಟೀಕೆ ಮಾಡಿದರೆ ರಾಜಕಾರಣವಾಗುವುದಿಲ್ಲ. ಯಾರೇ ಆಗಲಿ ರಾಜಕಾರಣಕ್ಕಾಗಿ ಮಾತ್ರ ಟೀಕೆ ಮಾಡುವಂತಾಗಬಾರದು. ರಾಜ್ಯದ ಜನರಿಗೆ ಒಳಿತು ಮಾಡುವ ಯೋಜನೆಗಳ ಬಗ್ಗೆ ಮಾತನಾಡಬೇಕು ಎಂದು ಸಲಹೆ ನೀಡಿದರು.
ಒಂದನೇ ತರಗತಿಯಿಂದ ಶಾಲೆಗಳು ಆರಂವಾಗಬೇಕು. ಈ ಬಗ್ಗೆ ಈ ಹಿಂದೆ ಸುರೇಶ್ ಕುಮಾರ್ ಸಚಿವರಿದ್ದಾಗ ನಾನು ಶಾಲೆ ಆರಂಭ ಮಾಡುವುದಕ್ಕೆ ಮಾಹಿತಿ ನೀಡಿದ್ದೆ. ಶಾಲೆಯಿಂದ ಮಕ್ಕಳ ಹೊರಗಿದ್ದರೆ ಶಿಕ್ಷಣದಿಂದ ದೂರವಾಗುತ್ತಾರೆ. ಮೊದಲು ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು. ಪಶ್ಚಿಮ ಬಂಗಾಳದಲ್ಲಿ ಅನುಸರಿಸುವ ನಿಯಮ ಅನುಸರಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅವಸರದಲ್ಲಿ ಜಾರಿಗೊಳಿಸಬಾರದು. ನನಗೆ ಈಗ ಮನೆ ನೀಡಿದ್ದಾರೆ. ಈ ಹಿಂದೆ ಸಿ ಪಿ ಯೋಗೀಶ್ವರ್ ಆ ಮನೆಯಲ್ಲಿದ್ದರು, ಈಗ ಅವರು ಬಿಟ್ಟಿದ್ದಾರೆ. ಸರ್ಕಾರ ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ. ಸಭಾಪತಿ ಹಾಗೂ ಸಭಾಧ್ಯಕ್ಷರಿಗೆ ಮನೆ ನೀಡಬೇಕು ಎಂದು ಹೊರಟ್ಟಿ ಬೇಸರ ಹೊರಹಾಕಿದರು.