ಕೊಪ್ಪಳ: ಮುಸ್ಲಿಮರ ಹಬ್ಬ ಮೊಹರಂ ಅನ್ನು ಉತ್ತರ ಕರ್ನಾಟಕ ಭಾಗದಲ್ಲಿ ಭಾವೈಕ್ಯತೆಯಿಂದ ಆಚರಿಸಲಾಗುತ್ತದೆ. ಇಲ್ಲಿ ಮೊಹರಂ ಕೇವಲ ಹಬ್ಬವಾಗದೇ ಭಾವೈಕ್ಯತೆಯ ಬಂಧವೂ ಆಗಿದೆ. ಇದಕ್ಕೆ ಕೊಪ್ಪಳ ತಾಲೂಕಿನ ಮುದ್ದಾಬಳ್ಳಿಯ ಮಸೀದಿ ಸಾಕ್ಷಿ.
ಉ.ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಕೆಲವು ಹಬ್ಬಗಳನ್ನು ಜಾತಿ, ಧರ್ಮ ಮೀರಿ ಆಚರಿಸಲಾಗುತ್ತಿದೆ. ಹಿಂದೂ-ಮುಸ್ಲಿಮರು ಒಟ್ಟು ಸೇರಿ ಸಂಭ್ರಮಿಸುವ ಮೊಹರಂ ಇದೀಗ ಗಮನ ಸೆಳೆಯುತ್ತಿದೆ. ಮೊಹರಂನ ಅಲಾಯಿ ದೇವರು ಸ್ಥಾಪನೆಯಾಗುವ ಮಸೀದಿಯಲ್ಲಿ ಹಿಂದೂ ದೇವರ ಮೂರ್ತಿಗಳು, ಫೋಟೋಗಳನ್ನಿಟ್ಟು ಪೂಜಿಸಲಾಗುತ್ತಿದ್ದು, ಇಲ್ಲಿನ ಮುದ್ದಾಬಳ್ಳಿ ಮಸೀದಿ ಕುತೂಹಲಕ್ಕೆ ಕಾರಣವಾಗಿದೆ.
ಮುದ್ದಾಬಳ್ಳಿಯಲ್ಲಿ ಸುಮಾರು 25 ಮುಸ್ಲಿಂ ಸಮುದಾಯದ ಕುಟುಂಬಗಳಿವೆ. ಹಿಂದುಗಳು ಕೂಡ ಅಧಿಕ ಸಂಖ್ಯೆಯಲ್ಲಿದ್ದಾರೆ. ಮೊಹರಂ ಸಂದರ್ಭದಲ್ಲಿ ಅಲಾಯಿ ದೇವರನ್ನು ಕೂರಿಸುವ ಮಸೀದಿಯನ್ನು ಇತ್ತೀಚೆಗೆ ನೂತನವಾಗಿ ನವೀಕರಣ ಮಾಡಲಾಗಿದೆ. ಹೀಗೆ ನವೀಕರಣಗೊಂಡಿರುವ ಮಸೀದಿಯಲ್ಲಿ ಭಾವೈಕ್ಯತೆಯ ಸಂಕೇತವಾಗಿ ಹಿಂದೂ ಧರ್ಮದ ದೇವರುಗಳಾದ ಪರಮೇಶ್ವರ, ದುರ್ಗಾದೇವಿ, ಲಕ್ಷ್ಮೀ, ಸರಸ್ವತಿ, ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳ ಚಿತ್ರವಿರುವ ಫೋಟೋಗಳನ್ನು ಗೋಡೆಗೆ ಜೋಡಿಸಿದ್ದಾರೆ.
ಮೊಹರಂ ಹಬ್ಬದಲ್ಲಿ ಹಿಂದುಗಳು ಸಂಭ್ರಮದಿಂದ ಪಾಲ್ಗೊಂಡರೆ, ಹಿಂದೂಗಳ ಹಬ್ಬಗಳಾದ ನಾಗರ ಪಂಚಮಿ, ದಸರಾ, ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳನ್ನು ಮುಸ್ಲಿಮರು ಸಹ ಆಚರಿಸುತ್ತಾರೆ. ದೇವರೊಬ್ಬ ನಾಮ ಹಲವು ಎಂಬಂತೆ ನಾವು ಜಾತಿ, ಧರ್ಮವನ್ನು ಮರೆತು ಎಲ್ಲರೂ ಒಂದೇ ಎಂದುಕೊಂಡು ಭಾವೈಕ್ಯತೆಯಿಂದ ಹಬ್ಬ ಮಾಡುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.