ಗಂಗಾವತಿ: ಕನಕಗಿರಿ ತಾಲ್ಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವೃದ್ಧೆ ಸಾವನ್ನಪ್ಪಿದ ಹಾಗೂ ಹಲವರು ಅನಾರೋಗ್ಯಕ್ಕೆ ತುತ್ತಾದ ಪ್ರಕರಣಕ್ಕೆ ಇದೀಗ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಆದ್ರೆ ಇಲಾಖೆ ತೇಪೆ ಹಚ್ಚುವ ಕೆಲಸ ಮಾಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವೃದ್ಧೆ ಸಾವನ್ನಪ್ಪಿರುವುದು ಕಿಡ್ನಿ ವಿಫಲತೆ, ನ್ಯುಮೋನಿಯಾ, ಹೃದಯ ಕಾಯಿಲೆಯಿಂದ ಎಂದು ಆರೋಗ್ಯ ಇಲಾಖೆ ಹೇಳಿಕೆ ನೀಡಿದೆ.
ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅಲಕಾನಂದ ಮಳಗಿ, ಈ ಬಗ್ಗೆ ಪರಿಶೀಲಿಸಿದ್ದಾರೆ. 'ಬಸರಿಹಾಳ ಗ್ರಾಮದ ಹೊನ್ನಮ್ಮ ಶಿವಪ್ಪ ಅವರಿಗೆ ಹೃದಯದ ಕಾಯಿಲೆ, ನ್ಯುಮೋನಿಯಾ ಇದ್ದು ಕಿಡ್ನಿ ವಿಫಲಗೊಂಡಿದೆ. ಈ ಕಾರಣಗಳಿಂದ ಮರಣ ಹೊಂದಿರುತ್ತಾರೆ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ವರದಿಯಲ್ಲಿ ಉಲ್ಲೇಖಿಸಲಾಗಿದೆ' ಎಂದು ಡಿಎಚ್ಓ ಡಾ. ಅಲಕನಂದಾ ಕೆ ಮಳಗಿ ತಿಳಿಸಿದ್ದಾರೆ.
ಬಸರಿಹಾಳ ಗ್ರಾಮದ ಹೊನ್ನಮ್ಮ ಶಿವಪ್ಪ (66) ಅವರಿಗೆ ಮೇ 30 ರಂದು ಎರಡು ಬಾರಿ ಬೇಧಿಯಾಗಿ ಗಂಗಾವತಿ ನಗರದ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಇಸಿಜಿ ಮತ್ತು ರಕ್ತ ಪರೀಕ್ಷೆ ಮಾಡಲಾಗಿ ರೋಗಿಗೆ ಕಿಡ್ನಿ ತೊಂದರೆ ಮತ್ತು ಹೃದಯ ತೊಂದರೆಗಳು ಇರುವುದು ಕಂಡುಬಂದಿತ್ತು. ಕೂಡಲೇ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹೋಗುವಂತೆ ನಿರ್ದೇಶಿಸಿದ್ದರು. ಆದರೆ, ಆ ಮಹಿಳಾ ರೋಗಿಯು ಹೆಚ್ಚಿನ ಚಿಕಿತ್ಸೆಗೆ ಹೋಗದೇ ವಾಪಸ್ ಊರಿಗೆ ಬಂದು ಮಾರನೇ ದಿನ ಮೇ 31ರಂದು ಕಿಮ್ಸ್ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ರೋಗಿಯನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ವೃದ್ಧೆ ಸಾವು: 15 ಜನ ಅಸ್ವಸ್ಥ
ದಾಖಲು ಮಾಡಿಕೊಳ್ಳುವಾಗ ರೋಗಿಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದಾಗಲೂ ಚಿಕಿತ್ಸೆ ಫಲಕಾರಿಯಾಗದೆ ರೋಗಿಯು ಅದೇ ದಿನ ಮೇ 31ರಂದು ಮೃತಪಟ್ಟಿದ್ದರು. ಮೃತರಿಗೆ ಹೃದಯದ ಕಾಯಿಲೆ, ನ್ಯುಮೋನಿಯಾ ಇದ್ದು, ಕಿಡ್ನಿ ವಿಫಲಗೊಂಡಿದ್ದ ಕಾರಣಗಳಿಂದ ಮರಣ ಹೊಂದಿರುತ್ತಾರೆ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅಲಕಾನಂದ ಮಳಗಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಗಂಗಾವತಿಯ ಕನಕಗಿರಿ ತಾಲೂಕಿನಲ್ಲಿ ಕಲುಷಿತ ನೀರು ಸೇವಿಸಿ, ವೃದ್ಧೆ ಸಾವನ್ನಪ್ಪಿರುವ ಹಾಗೂ 18 ಮಂದಿ ಅಸ್ವಸ್ಥಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಹೊನ್ನಮ್ಮ ಸಾವನ್ನಪ್ಪಿದ್ದು ಮಾತ್ರವಲ್ಲದೆ, ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡು ಸುಮಾರು 15ಕ್ಕೂ ಹೆಚ್ಚು ಮಂದಿಯನ್ನು ಚಿಕಿತ್ಸೆಗಾಗಿ ಕನಕಗಿರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊನ್ನಮ್ಮಳ ಆರೋಗ್ಯದಲ್ಲಿ ತೀವ್ರ ಏರುಪೇರು ಇದ್ದ ಕಾರಣ ಮಹಿಳೆ ಸಾವನ್ನಪ್ಪಿದ್ದರು. ಮಹಿಳೆ ಸಾವಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಕುಡಿಯುವ ನೀರಿನ ಪೈಪ್ ಸೋರಿಕೆಯಾಗಿ ಕಲುಷಿತ ನೀರು ಬೆರೆತಿದೆ. ಇದರ ಬಗ್ಗೆ ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದ್ದರೂ, ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅದೇ ನೀರನ್ನು ಕುಡಿದು ಹಲವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ವಿರುದ್ಧ ದೂರಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆ ಸಾವು; 18 ಮಂದಿ ಅಸ್ವಸ್ಥ