ಗಂಗಾವತಿ : ಹಾಡುಹಗಲೇ ಇಲ್ಲಿನ ಕನಕದಾಸ ವೃತ್ತದಲ್ಲಿ ಸಂಜೆಯ ಸಮಯದಲ್ಲಿ ಅಪರಿಚಿತರು ತಂದೆ ಮತ್ತು ಮಗ ಇಬ್ಬರನ್ನು ಅಪಹರಿಸಿಕೊಂಡ ಹೋದ ಪ್ರಕರಣಕ್ಕೆ ಇದೀಗ ರೋಚಕ ಟ್ವಿಸ್ಟ್ ಸಿಕ್ಕಿದೆ. ನಾಪತ್ತೆಯಾದ ಇಬ್ಬರು ಇದೀಗ ಸುರಕ್ಷಿತವಾಗಿರುವುದು ಗೊತ್ತಾಗಿದೆ.
ಇಲ್ಲಿನ ನೀಲಕಂಠೇಶ್ವರ ಕ್ಯಾಂಪಿನ ನಿವಾಸಿಗಳಾದ ವೃತ್ತಿಪರ ಹಂದಿ ಸಾಕಾಣಿಕೆದಾರರಾದ ದುರುಗಪ್ಪ (45) ಹಾಗೂ ಆತನ ಮಗ ವೆಂಕಟೇಶ್ (25) ಎಂಬುವರನ್ನು ಅಪರಿಚಿತ ವ್ಯಕ್ತಿಗಳು ಜನನಿಬಿಡಿ ಪ್ರದೇಶದಿಂದಲೇ ವಾಹನದಲ್ಲಿ ಬಲವಂತವಾಗಿ ಕರೆದೊಯ್ದಿದ್ದರು.
ಇದೀಗ ಇಬ್ಬರು ವ್ಯಕ್ತಿಗಳು ಸುರಕ್ಷಿತವಾಗಿದ್ದು, ಸಿಂಧನೂರಿನ ಪೊಲೀಸರ ವಶದಲ್ಲಿದ್ದಾರೆ ಎಂದು ಗೊತ್ತಾಗಿದೆ. ಸಿಂಧನೂರಿನ ವ್ಯಕ್ತಿಗಳಿಂದ ಇತ್ತೀಚೆಗೆ ದುರುಗಪ್ಪ ಸುಮಾರು 60 ಹಂದಿಗಳನ್ನು ಕೊಂಡಿದ್ದಾರೆ.
ಆದರೆ, ಅವುಗಳನ್ನು ಕಳ್ಳತನ ಮಾಡಿಕೊಂಡು ಬರಲಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಹಂದಿ ಮಾಲೀಕ ಸಿಂಧನೂರಿನಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಕಳ್ಳತನ ಮಾಡಿಕೊಂಡು ಬಂದಿದ್ದ ವ್ಯಕ್ತಿಗಳಿಂದ ಹಂದಿಗಳನ್ನು ಕೊಂಡ ತಪ್ಪಿಗಾಗಿ ಇದೀಗ ತಂದೆ-ಮಗ ಸಿಂಧನೂರಿನ ಪೊಲೀಸರ ವಶದಲ್ಲಿದ್ದು, ಇದೀಗ 60ರ ಪೈಕಿ 44 ಹಂದಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.