ಕುಷ್ಟಗಿ(ಕೊಪ್ಪಳ): ಪಟ್ಟಣದಲ್ಲಿರುವ ಹಳೆ ತಹಶೀಲ್ದಾರ್ ಕಚೇರಿಗೆ ತಾಲೂಕಾಡಳಿತ ಕಾಯಕಲ್ಪಗೊಳಿಸಿ ಪುನರುಜ್ಜೀವನಗೊಳಿಸುವಂತೆ ಒತ್ತಾಯಿಸಿ ಕುಷ್ಟಗಿ ಸಮಾನಮನಸ್ಕ ಪ್ರಗತಿಪರ ನಾಗರಿಕರ ಒಕ್ಕೂಟದ ಸದಸ್ಯರು, ತಹಶೀಲ್ದಾರ ಅನುಪಸ್ಥಿತಿಯಲ್ಲಿ ಗ್ರೇಡ್-2 ತಹಶೀಲ್ದಾರ್ ವಿಜಯಾ ಅವರಿಗೆ ಮನವಿ ಸಲ್ಲಿಸಿದರು.
ಪಾಳುಬಿದ್ದ ಸ್ವಾತಂತ್ರ್ಯ ಪೂರ್ವದ ಹಳೆ ತಹಶೀಲ್ದಾರ ಕಚೇರಿಯ ಕಮಾನು ಕಟ್ಟಡ ಶೀರ್ಷಿಕೆಯಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೆ ಸ್ಥಳೀಯ ಸಮಿತಿಯ ಸದಸ್ಯರು ಧ್ವನಿ ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಒಕ್ಕೂಟದ ವೀರೇಶ ಬಂಗಾರಶೆಟ್ಟರ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಪಾರಂಪರಿಕಾ ಕಟ್ಟಡ ತಾಲೂಕಿನ ಅಪರೂಪದ ಸ್ಮಾರಕಗಳಲ್ಲಿ ಒಂದಾಗಿದೆ. ನಿರ್ವಹಣೆ ಇಲ್ಲದೇ ಸರಿಯಾಗಿ ಬಳಸಿಕೊಳ್ಳದಿರುವುದರಿಂದ ಪಾಳು ಬಿದ್ದಿದೆ. ಇದನ್ನು ದುರಸ್ಥಿಗೊಳಿಸಿ, ಖಾಸಗಿ ಮಾಲಿಕತ್ವದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಸರ್ಕಾರಿ ಇಲಾಖೆಯನ್ನು ಹಳೆ ತಹಶೀಲ್ದಾರ ಕಛೇರಿಗೆ ಸ್ಥಳಾಂತರಿಸಿ, ಕಛೇರಿಗೆವಹಿಸಿ ಸರ್ಕಾರದ ಬೊಕ್ಕಸದಲ್ಲಿನ ಹಣ ಉಳಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಪುರಸಭೆ ಸದಸ್ಯ ವಸಂತ ಮೇಲಿನಮನಿ, ನಜೀರಸಾಬ್ ಮೂಲಿಮನಿ, ಅಜ್ಜಪ್ಪ ಕರಡಕಲ್,ಕಲ್ಲೇಶ ತಾಳದ್, ರವೀಂದ್ರ ಬಾಕಳೆ ಬಸವರಾಜ ಗಾಣಗೇರ, ಆರ್.ಟಿ.ಸುಬಾನಿ, ಮೆಹಬೂಬ್, ಅಪ್ತಾಬ್ ಅಷ್ರಾಫ್, ಸಯ್ಯದ್ ಮುರ್ತುಜಾ ಮತ್ತಿತರಿದ್ದರು.