ಕುಷ್ಟಗಿ: ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಿದ್ದು, ಈ ಭಾಗ ಕಡಲೆ ಬೆಳೆದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಹೆಸರು ನೋಂದಾಯಿಸಿದ ರೈತರಿಂದ ಪ್ರತಿ ಕ್ವಿಂಟಲ್ಗೆ 4,875 ರೂಪಾಯಿಗೆ ಖರೀದಿಸಲಾಗುತ್ತಿದೆ. ಕೊರೊನಾದಿಂದ ಕಂಗಾಲಾದ ರೈತರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.
ಕುಷ್ಟಗಿ ತಾಲೂಕಿನ ಹನುಮಸಾಗರ ಹಾಗೂ ತಾವರಗೇರಾ ಪ್ರಾಥಮಿಕ ಕೃಷಿ ಸಹಕಾರ ಕೇಂದ್ರದಲ್ಲಿ ಬೆಂಬಲ ಬೆಲೆಯ ಕೇಂದ್ರ ಆರಂಭಿಸಲಾಗಿದೆ. ಲಾಕ್ಡೌನ್ ಹಿನ್ನೆಲೆ ಸ್ಥಗಿತಗೊಂಡಿದ್ದ ಬೆಂಬಲ ಬೆಲೆ ಖರೀದಿ ಕೇಂದ್ರ ಏಪ್ರಿಲ್ 11ರಿಂದ ಪುನಃ ಆರಂಭಗೊಂಡಿತ್ತು. ಖರೀದಿ ಕೇಂದ್ರದಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಈ ಖರೀದಿ ಪ್ರಕ್ರಿಯೆಯು ಮೇ 12ರಂದು ಮುಕ್ತಾಯವಾಗಲಿದೆ. ಈಗಾಗಲೇ ಶೇ.75ರಿಂದ 80ರಷ್ಟು ರೈತರ ಕಡಲೆ ಉತ್ಪನ್ನ ತೂಕ ಮಾಡಿ, ಖರೀದಿಸಲಾಗಿದೆ. ಪ್ರತಿಯೊಬ್ಬ ರೈತರಿಂದ ಗರಿಷ್ಠ 10 ಕ್ವಿಂಟಲ್ ಖರೀದಿಸಲಾಗುತ್ತಿದೆ ಎಂದು ಹನುಮಸಾಗರ ಪ್ರಾಥಮಿಕ ಕೃಷಿ ಸಹಕಾರ ಸಂಘದ ಕಾರ್ಯದರ್ಶಿ ಸುರೇಶ ಪಟ್ಟೇದ್ ಮಾಹಿತಿ ನೀಡಿದರು.
ಹನುಮಸಾಗರ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿರುವ ಖರೀದಿ ಕೇಂದ್ರದಲ್ಲಿ ನೋಂದಾಯಿತ 386 ರೈತರಲ್ಲಿ 310 ರೈತರಿಂದ ಖರೀದಿಯಾಗಿದೆ. ಮೆಣೆದಾಳ ಪ್ರಾಥಮಿಕ ಕೃಷಿ ಸಹಕಾರ ಕೇಂದ್ರದ ಖರೀದಿ ಕೇಂದ್ರ ತಾವರಗೆರಾದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ 790 ನೋಂದಾಯಿತ ರೈತರ ಪೈಕಿ 668 ರೈತರಿಂದ ಖರೀದಿ ಮಾಡಲಾಗಿದೆ. ಇಲ್ಲಿ ಖರೀದಿಸಿದ ಕಡಲೆಯನ್ನು ಕುಷ್ಟಗಿ ಉಗ್ರಾಣ ನಿಗಮದಲ್ಲಿ ವೈಜ್ಞಾನಿಕವಾಗಿ ದಾಸ್ತಾನು ಮಾಡಲಾಗುತ್ತಿದೆ ಎಂದು ತಹಶೀಲ್ದಾರ್ ಎಂ.ಸಿದ್ದೇಶ ಎಂದರು.