ಗಂಗಾವತಿ (ಕೊಪ್ಪಳ) : ಹಿಂದುಗಳ ಪವಿತ್ರ ಧಾರ್ಮಿಕ ತಾಣ ಗಂಗಾವತಿ ತಾಲೂಕಿನ ಅಂಜನಾದ್ರಿ ದೇಗುಲ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಐದು ಸಾವಿರ ಕೋಟಿ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಜಿ.ಜನಾರ್ದನ ರೆಡ್ಡಿ ತಿಳಿಸಿದ್ದಾರೆ. ಭಾನುವಾರ ಅಂಜನಾದ್ರಿಯ ಆಂಜನೇಯಸ್ವಾಮಿ ದೇವಸ್ಥಾನದ ಅಭಿವೃದ್ಧಿಗಾಗಿ ಜಿಲ್ಲಾಡಳಿತ ಮೀಸಲಿಟ್ಟಿರುವ ಚಿಕ್ಕರಾಂಪೂರ ಭಾಗದ 72 ಎಕರೆ ಭೂಮಿಯನ್ನು ಅವರು ಪರಿಶೀಲಿಸಿದರು. ಇದೇ ವೇಳೆ ಅಧಿಕಾರಿಗಳೊಂದಿಗೆ ವಿವಿಧ ಕಾಮಗಾರಿಗಳ ಕುರಿತು ಚರ್ಚಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ, "ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗಾಗಿ ಐದು ಸಾವಿರ ಕೋಟಿ ರೂಪಾಯಿಗಳ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಭೂಮಿಯ ಆರಂಭಿಕ ಹಂತದ ಪರಿಶೀಲನೆ ನಡೆಸಲಾಗಿದೆ. ಚಿಕ್ಕರಾಂಪುರ ಮತ್ತು ಅಂಜನಹಳ್ಳಿ ರಸ್ತೆಯಲ್ಲಿರುವ 72 ಎಕರೆ ಭೂಮಿಯಲ್ಲಿ ಭಕ್ತರಿಗೆ ವಸತಿ ನಿಲಯ, ಪ್ರಸಾದ ನಿಲಯ ಹಾಗು ಭಕ್ತರ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶವಿದೆ" ಎಂದು ಹೇಳಿದರು.
ಉದ್ದೇಶಿತ ಕಾಮಗಾರಿ ತ್ವರಿತವಾಗಿ ಆರಂಭಿಸಲು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ರೆಡ್ಡಿ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ಕೆಲವು ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರಕ್ಕೆ ಮನವಿ ಮಾಡಿದರು.
ಚಿಕ್ಕರಾಂಪುರ-ಜಂಗ್ಲಿ ರಸ್ತೆಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ, ಕಾಮಗಾರಿ ಪರಿಶೀಲನೆ ಮಾಡಿದರು. ಚಿಕ್ಕರಾಂಪುರ-ಜಂಗ್ಲಿ ರಸ್ತೆಯ ಜೀರೊ ಕಿಲೋ ಮೀಟರ್ನಲ್ಲಿ ಸೇತುವೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಪಿಡಬ್ಲೂಡಿ ಇಲಾಖೆಯ ಅಧಿಕಾರಿಗಳು ಶಾಸಕರಿಗೆ ತಿಳಿಸಿದರು.
ಇದನ್ನೂ ಓದಿ : ಸುರಿಯುವ ಜಡಿ ಮಳೆಯಲ್ಲಿಯೇ ಸಿಟಿ ರೌಂಡ್ಸ್ ಹಾಕಿದ ಶಾಸಕ ಜನಾರ್ದನ ರೆಡ್ಡಿ
ತಿರುಪತಿ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿ : ತಿರುಪತಿ ದೇವಸ್ಥಾನದ ಮಾದರಿಯಲ್ಲಿ ಅಂಜನಾದ್ರಿ ದೇಗುಲವನ್ನು ಅಭಿವೃದ್ಧಿ ಮಾಡುವ ಗುರಿ ಹೊಂದಿದ್ದೇವೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದ್ದರು. ಚುನಾವಣೆ ಪೂರ್ವದಲ್ಲಿ ಹೇಳಿದಂತೆ ಅಂಜನಾದ್ರಿ ದೇವಸ್ಥಾನವನ್ನು ತಿರುಪತಿ ತಿಮ್ಮಪ್ಪನ ದೇವಸ್ಥಾನದಂತೆ ಅಭಿವೃದ್ಧಿ ಮಾಡುತ್ತೇನೆ. ಅಲ್ಲದೆ ಗಂಗಾವತಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದ್ದರು.
ಅಂಜನಾದ್ರಿ ಅಭಿವೃದ್ಧಿಗೆ ಬಿಜೆಪಿ ಅನುದಾನ ನೀಡಿಲ್ಲ : ಹಿಂದಿನ ಬಿಜೆಪಿಯ ಆಡಳಿತದ ಅವಧಿಯಲ್ಲಿ ಹನುಮನ ಜನ್ಮ ಸ್ಥಳವಾದ ಅಂಜನಾದ್ರಿ ಅಭಿವೃದ್ಧಿಗೆ ಒಂದು ರೂಪಾಯಿ ಅನುದಾನವನ್ನು ನೀಡಲಿಲ್ಲ ಎಂದು ಜನಾರ್ದನ ರೆಡ್ಡಿ ದೂರಿದ್ದರು. ವಿಧಾನಸಭೆಯಲ್ಲಿ ಮಾತನಾಡಿದ್ದ ಅವರು, ಅಯೋಧ್ಯೆ ರಾಮನ ಜನ್ಮಸ್ಥಾನವಾದರೆ, ಗಂಗಾವತಿ ತಾಲೂಕಿನ ಅಂಜನಾದ್ರಿ ಹನುಮನ ಜನ್ಮಸ್ಥಳ. ಅಂಜನಾದ್ರಿ ಅಭಿವೃದ್ಧಿಗೆ ಬಿಜೆಪಿ ಯಾವುದೇ ಅನುದಾನವನ್ನು ನೀಡಲಿಲ್ಲ. ಸರ್ಕಾರದ ಕೊನೆ ದಿನಗಳಲ್ಲಿ 120 ಕೋಟಿ ರೂಪಾಯಿಗಳನ್ನು ಅವರು ಘೋಷಿಸಿದರು. ಇದನ್ನೇ ಹೇಳಿಕೊಂಡು ನನ್ನ ವಿರುದ್ಧ ಚುನಾವಣೆಯಲ್ಲಿ ಪ್ರಚಾರ ನಡೆಸಿದರು ಎಂದು ಟೀಕಿಸಿದ್ದರು.
ಇದನ್ನೂ ಓದಿ : ನೊಣಗಳ ಉಪಟಳಕ್ಕೆ ಮುಕ್ತಿ ನೀಡಲು ಔಷಧಿ ಸಿಂಪಡಣೆ ಮಾಡಿದ ಗ್ರಾ ಪಂ ಸಿಬ್ಬಂದಿ