ಕೋಲಾರ: ಕಳೆದ ಒಂದು ವಾರದ ಹಿಂದೆ ಮದುವೆ ಆಗಿದ್ದ ಬಾಲಕಿ ಈಗ ಬೀದಿಗೆ ಬಂದಿದ್ದಾಳೆ. ಬಾಲ್ಯ ವಿವಾಹದಿಂದ ಬೇಸತ್ತು ಬುಧವಾರ ರಾತ್ರೋರಾತ್ರಿ ಮನೆ ಬಿಟ್ಟು ಬಂದಿದ್ದ ಬಾಲಕಿಯನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹಳೇಪಾಳ್ಯ ಗ್ರಾಮದಲ್ಲಿ ನಡೆದಿದೆ.
ಕಳೆದ ಒಂದು ವಾರದ ಹಿಂದೆ ಬಾಲಕಿಗೆ ಮದುವೆ ಮಾಡಲಾಗಿತ್ತು. ಇದರಿಂದ ಮನನೊಂದಿದ್ದ ಆಕೆ ನಿನ್ನೆ ರಾತ್ರಿ ಮನೆ ಬಿಟ್ಟು ಬಂದಿದ್ದಳು. ಅಲ್ಲದೇ ರಾಷ್ಟ್ರೀಯ ಹೆದ್ದಾರಿ 75ರ ನಂಗಲಿ ಬಳಿಯ ಹೆದ್ದಾರಿಯಲ್ಲಿ ಪರದಾಡುತ್ತಿರುವ ವೇಳೆ, ಸಾರ್ವಜನಿಕರು ಅಂಬೇಡ್ಕರ್ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಸಂದೇಶ್ ಎಂಬುವರಿಗೆ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಹಲ್ಲೆ ನಡೆಸಿ ಮುಂಬೈ ಸೇರಿದ್ದ ಆರೋಪಿ: 16 ವರ್ಷಗಳ ಬಳಿಕ ಬಂಧನ
ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಸಂದೇಶ್, ಹೆದ್ದಾರಿ ಮಧ್ಯೆ ಇದ್ದ ಬಾಲಕಿಯನ್ನ ವಿಚಾರಣೆ ನಡೆಸಿ, ಆಕೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರಿಗೆ ಒಪ್ಪಿಸಿದ್ದಾರೆ. ಪೋಷಕರು ಈ ಮದುವೆ ಮಾಡಿಸಿದ್ದು, ಇಷ್ಟವಿಲ್ಲದ ಕಾರಣ ಮನೆ ಬಿಟ್ಟು ಬಂದಿರುವುದಾಗಿ ಬಾಲಕಿ ತಿಳಿಸಿದ್ದಾಳೆ. ಅಧಿಕಾರಿಗಳು ಬಾಲಕಿಯಿಂದ ಪೋಷಕರ ಮಾಹಿತಿ ಪಡೆದು ಕ್ರಮ ಜರುಗಿಸಲು ಮುಂದಾಗಿದ್ದಾರೆ.