ಕೋಲಾರ : ಮುಳಬಾಗಲು ಕ್ಷೇತ್ರ ಎಂದರೆ ರಾಜ್ಯದ ಘಟಾನುಘಟಿ ನಾಯಕರಿಗೆ ಅಚ್ಚುಮೆಚ್ಚು. ಕಾರಣ ರಾಜ್ಯದ ಮೂಡಣ ಬಾಗಿಲು ಎಂದು ಕರೆಯುವ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಒಂದು ನಂಬಿಕೆ ಇದೆ. ಈ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೋ ಅದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಅನ್ನೋ ನಂಬಿಕೆ ಇದೆ. ಅದೇ ಕಾರಣಕ್ಕೆ ಮೂರು ಪಕ್ಷಗಳು ಈ ಕ್ಷೇತ್ರದಲ್ಲಿ ಗೆಲುವಿಗಾಗಿ ಹೆಚ್ಚಿನ ಪೈಪೋಟಿ ನಡೆಸುತ್ತವೆ.
ಚುನಾವಣೆಗೆ ಇನ್ನು 12 ದಿನಗಳಷ್ಟೇ ಬಾಕಿ ಇರುವುದರಿಂದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಹಲವು ತಂತ್ರಗಾರಿಕೆ ರೂಪಿಸಿದ್ದಾರೆ. ಈ ಬಾರಿ ಮುಳಬಾಗಿಲು ಕ್ಷೇತ್ರದಲ್ಲಿ ಯಾವ ಯಾವ ಪಕ್ಷದ ಪರಿಸ್ಥಿತಿ ಹೇಗಿದೆ ಅನ್ನೋದನ್ನು ನೋಡೋದಾದರೇ ಕಾಂಗ್ರೆಸ್ ಅಭ್ಯರ್ಥಿ ಆದಿ ನಾರಾಯಣನಿಗೆ, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರ ಬಲವಿದ್ದರೆ, ಕ್ಷೇತ್ರದಲ್ಲಿ ಖಾತೆ ತೆರೆಯಲು ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್ ಉತ್ಸಾಹದಲ್ಲಿದ್ದಾರೆ. ಇನ್ನು ಬಿಜೆಪಿಗೆ ಇಲ್ಲಿ ನೆಲೆ ಇಲ್ಲದಿದರೂ ಸಹ ಈ ಬಾರಿ ಪುಟಿದೇಳಲು ಅಭ್ಯರ್ಥಿ ಶಿಗೇಹಳ್ಳಿ ಸುಂದರ್ ಇನ್ನಿಲ್ಲದ ಕರಸತ್ತು ನಡೆಸಿದ್ದಾರೆ. ಮುಳಬಾಗಿಲಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಹಣಾಹಣಿ ಏರ್ಪಟ್ಟಿದೆ.
ಈ ವೇಳೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್, ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗಿಂತ ನಾನು ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಹಗಲು ರಾತ್ರಿ ಎನ್ನದೆ ಜನರೊಟ್ಟಿಗಿದ್ದು, ಅವರ ವಿಶ್ವಾಸ ಗಳಿಸಿದ್ದೇನೆ. ಈಗಾಗಲೇ ಹೋದ ಕಡೆಯಲ್ಲೆಲ್ಲಾ ಉತ್ತಮವಾದ ವಾತಾವರಣ ಕಂಡು ಬರುತ್ತಿದೆ. ಈ ಬಾರಿ ನನ್ನ ಜನ, ನನ್ನ ಕಾರ್ಯಕರ್ತರು ನನ್ನನ್ನು ಕೈಬಿಡೋದಿಲ್ಲ ಎನ್ನುವ ವಿಶ್ವಾಸವಿದೆ. ಕಳೆದ ಚುನಾವಣೆಯಲ್ಲಿ ಸೋತಾಗಲೂ ಸಹ ನಾನು ಕುಗ್ಗದೆ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.
ಮತ್ತೊಂದೆಡೆ ಚುನಾವಣಾ ಅವಧಿ ಕಡಿಮೆ ಇರುವ ಕಾರಣ ಕಾಂಗ್ರೆಸ್ ಅಭ್ಯರ್ಥಿ ಆದಿ ನಾರಾಯಣ ಬಿರುಸಿನಿಂದ ಪ್ರಚಾರ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಆದಿ ನಾರಾಯಣ ಅವರು, ಕೊತ್ತೂರು ಮಂಜುನಾಥ್, ಜೆಡಿಎಸ್‌ನ ಆಲಂಗೂರು ಶಿವಣ್ಣ ಬೆಂಬಲ ಸೂಚಿಸಿರುವುದರಿಂದ ನನಗೆ ಆನೆ ಬಲ ಸಿಕ್ಕಂತಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಶೇ.80 ರಷ್ಟು ಚುನಾವಣೆ ಪ್ರಚಾರ ನಡೆಸಿದ್ದೇವೆ. ಇಲ್ಲಿನ ಹೆಣ್ಣು ಮಕ್ಕಳು ಹೊರ ಭಾಗಕ್ಕೆ ಕೆಲಸಕ್ಕಾಗಿ ಹೋಗುತ್ತಿದ್ದಾರೆ. ನಾನು ಗೆದ್ದು ಬಂದರೇ ಈ ಭಾಗಕ್ಕೆ ಕಾರ್ಖಾನೆಗಳನ್ನು ತಂದು ಅವರಿಗೆಲ್ಲ ಉದ್ಯೋಗಕ್ಕೆ ಅನುಕೂಲ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಇನ್ನು ಬಿಜೆಪಿ ಅಭ್ಯರ್ಥಿ ಶಿಗೇಹಳ್ಳಿ ಸುಂದರ್ ಮಾತನಾಡಿ, ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಪಕ್ಷ ಗುರುತಿಸಿ ಅಭ್ಯರ್ಥಿಯನ್ನಾಗಿಸಿದ್ದಕ್ಕೆ ಎಲ್ಲಾ ಮುಖಂಡರಿಗೂ ಧನ್ಯವಾದ ತಿಳಿಸುತ್ತೇನೆ. ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿಯ ಕನಸು ಕಂಡಿರುವ ನನಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿಯೇ ನನಗೆ ಶ್ರೀರಕ್ಷೆ. ಉಭಯ ಸರ್ಕಾರದ ಅಭಿವೃದ್ಧಿ ಯೋಜನೆಗಳು ಮನೆ ಮನೆಗೆ ತಲುಪಿವೆ. ಹಾಗಾಗಿ ಅದೆಲ್ಲವೂ ಕೂಡಾ ನನಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿ ನನ್ನ ಗೆಲುವಿಗೆ ಸಹಾಯ ಮಾಡಲಿದೆ. ಈ ಬಾರಿ ಕ್ಷೇತ್ರದಲ್ಲಿ ಹೊಸ ಬದಲಾಣೆ ತರಬೇಕು ಎಂಬ ಉದ್ದೇಶದಿಂದ ಚುನಾವಣೆಯನ್ನು ಎದುರಿಸುತ್ತಿದ್ದೇವೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಕಾಂಗ್ರೆಸ್ನಿಂದ ನನಗೆ ಧಮ್ಕಿ.. ಶಿವನ ಕೊರಳಿಗೆ ನಾಗಸರ್ಪವೇ ಶೋಭೆ.. ಜನತೆಯೇ ಈಶ್ವರ ಸ್ವರೂಪಿ: ಮೋದಿ