ಕೋಲಾರ : ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಂದ್ರೆ ಮಾತ್ರ ಮಳೆ. ಇಲ್ಲವಾದ್ರೆ ಮಳೆನೂ ಇರಲ್ಲ. ಅವರ ಬಗ್ಗೆ ಮಾತನಾಡುವವರೂ ಇರಲ್ಲ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಧೈರ್ಯ ಮಾಡಿ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಗಟ್ಟಿ ಮನುಷ್ಯ. ಕೋಲಾರದಲ್ಲಿ ತೊಡೆ ತಟ್ಡಿದ ಮೇಲೆ ಹಿಂದೆ ಹೋಗಲ್ಲ. ಅಷ್ಟು ಕೀಳುಮಟ್ಟದ ರಾಜಕಾರಣಿ ಅವರಲ್ಲ ಎಂದು ಟಾಂಗ್ ನೀಡಿದರು.
ಇತ್ತೀಚೆಗೆ ನನ್ನ ವಿರುದ್ದ ಅಪಪ್ರಚಾರ ಮಾಡಲಾಗುತ್ತಿದೆ. ನಾನು ನಮ್ಮ ಸಮುದಾಯದ ಸ್ವಾಮೀಜಿ ಜೊತೆ ಸಂಧಾನ ಮಾತುಕತೆ ಮಾಡಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇನ್ನೂ ನಾನು ನೇರವಾಗಿ ಸಿದ್ದು ವಿರುದ್ಧ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಜೆಡಿಎಸ್‌ನಲ್ಲಿ ಸಿಎಂಆರ್ ಶ್ರೀನಾಥ್ ಮತ್ತು ಬಿಜೆಪಿಯಲ್ಲಿ ನಾನು ಕಣದಲ್ಲಿರುತ್ತೇನೆ. ಆದ್ರೆ ಇತ್ತೀಚೆಗೆ ಕೋಲಾರದಲ್ಲಿ ಸ್ಪರ್ಧೆ ಮಾಡಲು ಸಚಿವ ಮುನಿರತ್ನ, ವೈ.ಎ. ನಾರಾಯಣಸ್ವಾಮಿ ಅವರ ಹೆಸರುಗಳು ಕೇಳಿ ಬರುತ್ತಿದ್ದು ಅವರನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು. ಬಿಜೆಪಿ ರಾಷ್ಟ್ರೀಯ ಪಕ್ಷ, ಯಾರೇ ನಿಂತರೂ ಅವರಿಗೆ ಕೆಲಸ ಮಾಡುವೆ. ಕೋಲಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರಾನೇರ ಸ್ಪರ್ಧೆ ಇದ್ದು, ಇಲ್ಲಿ ಈಗಾಗಲೇ ಫಲಿತಾಂಶ ಬಂದಿದೆ. ನಾನು ಸಿದ್ದರಾಮಯ್ಯ ವಿರುದ್ದ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಲ ಗ್ರಾಮಗಳಲ್ಲಿ ಬಿಜೆಪಿಗೆ ಕಾಂಗ್ರೆಸ್ ಮುಖಂಡರ ಸೇರ್ಪಡೆಯಾಗಿದೆ. ಕೃಷ್ಣಬೈರೇಗೌಡ ಊಟ ಹಾಕಿದ ಪ್ರಯತ್ನದಿಂದ ಕಾಂಗ್ರೆಸ್ ಪಕ್ಷ ತಲೆ ಎತ್ತಿದೆ. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಡಿಪಾಸಿಟ್ ಕೂಡ ಬರುತ್ತಿರಲಿಲ್ಲ. ಇನ್ನೂ ಕಾಂಗ್ರೆಸ್ ನವರು ಶ್ರೀನಿವಾಸಗೌಡ ಅವರನ್ನು ಕರೆದುಕೊಂಡು ಹಳ್ಳಿಗಳಿಗೆ ಹೋದರೆ ಒಳ್ಳೆಯದು. ಆದರೆ ಅವರನ್ನು ಬಿಟ್ಟು ಪ್ರಚಾರಕ್ಕೆ ಹೋಗುತ್ತಿದ್ದಾರೆ. ಪ್ರತಿ ಗ್ರಾಮದಲ್ಲೂ ನನ್ನ ಪಡೆ ಇದೆ. ಹೊಸದಾಗಿ ಕಟ್ಟುವ ಅವಶ್ಯಕತೆ ಇಲ್ಲ ಎಂದರು.
ನಾನು ಹಿಂದುತ್ವ ಮತ್ತು ನರೇಂದ್ರ ಮೋದಿಯವರ ಹೆಸರಿನಲ್ಲೇ ಚುನಾವಣೆಗೆ ಹೋಗಿದ್ದೇನೆ. ಕ್ಷೇತ್ರದಲ್ಲಿ ನನ್ನ ಶಕ್ತಿ ಸುಮಾರು 70 ಶೇಕಡಾ ಇದ್ದು, ಬಿಜೆಪಿಯ ಶಕ್ತಿಯೂ 30 ಶೇ ಇದೆ. ಒಟ್ಟು 100 ಶೇ ನಾನು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ. ಸುಮಾರು 1ಲಕ್ಷಕ್ಕಿಂತಲೂ ಅಧಿಕ ಮತಗಳಿಂದ ನಾನು ಗೆಲುವು ಸಾಧಿಸುತ್ತೇನೆ ಎಂದು ವರ್ತೂರು ಪ್ರಕಾಶ್ ಹೇಳಿದರು.
ಸಿದ್ದರಾಮಯ್ಯಗೆ ಸವಾಲು: ಕಾಂಗ್ರೆಸ್ ಎಷ್ಟೇ ಸಭೆಗಳನ್ನೂ ನಡೆದರೂ ಯಾವುದೇ ಪ್ರಯೋಜನ ಆಗಲ್ಲ. ಕುರುಬನಹಳ್ಳಿಯಲ್ಲಿ ಸುಮಾರು 380 ಕುರುಬ ಸಮುದಾಯದ ಮತಗಳಿವೆ. ಅವರು ಯಾರೂ ಸಿದ್ದರಾಮಯ್ಯ ಅವರ ಸಭೆಗೆ ಹೋಗಿಲ್ಲ.ಈ 380 ಜನರೂ ನನ್ನ ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯದಲ್ಲಿ ಸಿದ್ದರಾಮಯ್ಯ ಒಬ್ಬ ಕುರುಬ ಸಮುದಾಯದ ನಾಯಕ ಎಂದು ಜನರು ನೋಡಲು ಹೋಗುತ್ತಾರೆ. ಆದರೆ ಕೋಲಾರದಲ್ಲಿ 100 ಜನರೂ ನೋಡಲು ಹೋಗಿಲ್ಲ ಎಂದು ಹೇಳಿದರು. ಇಲ್ಲಿ ಒಂದು ಸಾವಿರ ಜನರನ್ನು ಸಿದ್ದರಾಮಯ್ಯ ಸೇರಿಸಿದರೆ ನಾನು ಕೋಲಾರದಿಂದ ಸ್ಪರ್ಧಿಸುವುದಿಲ್ಲ ಎಂದು ವರ್ತೂರು ಪ್ರಕಾಶ್ ಸಿದ್ದರಾಮಯ್ಯಗೆ ಸವಾಲೆಸೆದರು.
ಇದನ್ನೂ ಓದಿ : ವಿಜಯೇಂದ್ರ ಅಪ್ತನಿಗೆ ಸಂಸದ ಪ್ರಸಾದ್ ಠಕ್ಕರ್: ಬಿಎಸ್ವೈ ಹೆಸರು ದುರ್ಬಳಕೆ ಎಂದ ಕಾಡಾ ಅಧ್ಯಕ್ಷ