ಕೋಲಾರ: ಅನಾರೋಗ್ಯದಿಂದ ಮೃತಪಟ್ಟಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿ ಅಂತ್ಯಸಂಸ್ಕಾರ ಮಾಡಿದ್ದಾರೆ.
ಇಲ್ಲಿನ ಚಲುವನಹಳ್ಳಿ ಅರಣ್ಯ ಪ್ರದೇಶದ ಬೆಟ್ಟದ ಸಾಲಿನಲ್ಲಿ ಮೃತಪಟ್ಟಿದ್ದ ಮೂರು ವರ್ಷದ ಹೆಣ್ಣು ಚಿರತೆ ಕಂಡು ಯಾರಾದರೂ ಕೊಂದು ಹಾಕಿರಬಹುದೆಂಬ ಅನುಮಾನವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದರು.
ಆದರೆ ಚಿರತೆ ಮೈಮೇಲೆ ಯಾವುದೇ ಗಾಯದ ಗುರುತುಗಳಿರಲಿಲ್ಲ. ಚಿರತೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಮೇಲೆ ಅದು ಅನಾರೋಗ್ಯದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅರಣ್ಯ ಪರಿಪಾಲಕ ತ್ಯಾಗರಾಜ್ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.