ಮಡಿಕೇರಿ: ಮಾನವ ಹಾಗೂ ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದಿಂದ ಸೂಕ್ತ ಯೋಜನೆಯನ್ನು ರೂಪಿಸಲಾಗಿದೆ. ಈಗಾಗಲೇ ಸೋಲಾರ್ ತಡೆ ಬೇಲಿಗೆ 68 ಕೋಟಿ ರೂ.ಗಳನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಡಿಕೇರಿ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನಿಂದ ಸಕಲೇಶಪುರದವರೆಗೂ ಮಾನವ ಹಾಗೂ ವನ್ಯಜೀವಿ ಸಂಘಷ೯ ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಲಾಗಿದೆ. ಈ ಕುರಿತು ತಜ್ಞರು ಪರಿಶೀಲಿಸಿ ವರದಿ ಸಲ್ಲಿಸಲಿದ್ದಾರೆ ಎಂದರು.
ಕೊಡಗಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕಾಮಗಾರಿ ಪ್ರಗತಿಗೆ ತೊಡಕಾಗಿದೆ. ಹೀಗಿದ್ದರೂ, ಕೊಡಗಿನ ಅಭಿವೖದ್ದಿ ಯೋಜನೆಗಳಿಗೆ ಸರ್ಕಾರದಿಂದ ಸಮರ್ಪಕ ಅನುದಾನ ನೀಡಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಾಫಿ ಬೆಳೆಗಾರರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್: ಕೊಡಗು ಜಿಲ್ಲೆಯ ಕಾಫಿ ಬೆಳೆಗಾರ 10 ಹೆಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಗಾಂಧಿ ಮೈದಾನದಲ್ಲಿ ನಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯ ಫಲಾನುಭವಿಗಳ ಸಮ್ಮೇಳನ ಹಾಗೂ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಉದ್ಘಾಟಿಸಿ ಮಾತನಾಡಿದರು.
''ಕಾಫಿ ಬೆಳೆಗಾರರಿಗೆ 10 ಹೆಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸುವ ಬಗ್ಗೆ ಈಗಾಗಲೇ ಘೋಷಿಸಲಾಗಿದೆ. ಆದರೆ, ಹಿಂದಿನ ಬಾಕಿ ಉಳಿಸಿಕೊಂಡಿರುವ ಕಾರಣಕ್ಕೆ ಅಧಿಕಾರಿಗಳು ಉಚಿತ ವಿದ್ಯುತ್ ಒದಗಿಸದೇ ಇರಬಾರದು. ಬೆಳೆಗಾರರ ಆರ್ಥಿಕ ಹೊರೆ ಇಳಿಸಲು ಸರ್ಕಾರ ಈ ಯೋಜನೆ ಜಾರಿಗೊಳಿಸಿದ್ದು, ಎಲ್ಲರಿಗೂ ಉಚಿತ ವಿದ್ಯುತ್ ಒದಗಿಸಬೇಕು'' ಎಂದರು.
ಕೊಡವ ಜನಾಂಗದ ಅಭಿವೃದ್ಧಿಗೆ 10 ಕೋಟಿ: ಕೊಡವ ಜನಾಂಗದ ಅಭಿವೃದ್ಧಿಗೆ ಈ ಹಿಂದೆ 10 ಕೋಟಿ ಮೀಸಲಿರಿಸಲಾಗಿದ್ದು, ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿಯೂ 10 ಕೋಟಿ ಅನುದಾನ ಮೀಸಲಿಡಲು ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ಬೆಂಗಳೂರಿನಲ್ಲಿ 7 ಎಕರೆ ಜಮೀನನ್ನು ರಿಯಾಯಿತಿ ದರದಲ್ಲಿ ಒದಗಿಸಲಾಗಿದೆ. ಜೊತೆಗೆ ಮಳೆ ಹೆಚ್ಚಾಗಿರುವ ಹಿನ್ನೆಲೆ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಲಾಗಿದೆ. ಇತರ ಅನುದಾನದ ಜೊತೆಗೆ ಹೆಚ್ಚುವರಿಯಾಗಿ 100 ಕೋಟಿ ಅನುದಾನ ಜಿಲ್ಲೆಗೆ ದೊರಕಲಿದೆ ಎಂದು ತಿಳಿಸಿದರು.
ಕರ್ನಾಟಕ ಈಗ ಹಿಂದಿನ ಕರ್ನಾಟಕದಂತೆ ಇಲ್ಲ. ಪ್ರತಿಯೊಬ್ಬ ಶ್ರೀಸಾಮಾನ್ಯ ಆರೋಗ್ಯವಂತ, ಶಿಕ್ಷಣಭರಿತ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಭದ್ರತೆ, ಆಂತರಿಕ ಸುರಕ್ಷತೆ, ಕಾನೂನು ಸುವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಕಳೆದ 70 ವರ್ಷಗಳಲ್ಲಿ ಆಗದ ಅಭಿವೃದ್ಧಿಯನ್ನು ನರೇಂದ್ರ ಮೋದಿ ಮಾಡಿ ತೋರಿಸಿದ್ದಾರೆ ಎಂದರು.
12 ಕೋಟಿ ಮನೆಗಳಿಗೆ ಕುಡಿಯುವ ನೀರು: ಕಳೆದ 3 ವರ್ಷದಲ್ಲಿ ದೇಶದ 12 ಕೋಟಿ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಲಾಗಿದೆ. ರಾಜ್ಯದ 40 ಲಕ್ಷ ಮನೆಗಳಿಗೆ ನೀರಿನ ಸೌಲಭ್ಯ ದೊರೆತಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ 10,000 ರೂ. ನೇರವಾಗಿ ರೈತರ ಖಾತೆಗೆ ಹಾಕಲಾಗಿದೆ. ಕೊಡಗಿನ 50,423 ರೈತರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಮಧ್ಯವರ್ತಿಗೆ ಅವಕಾಶ ಕಲ್ಪಿಸದೇ ನೇರವಾಗಿ ಫಲಾನುಭವಿಗಳಿಗೆ ಯೋಜನೆ ತಲುಪಿಸುವ ಕೆಲಸ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಆಗಿದೆ'' ಎಂದರು. ರೈತರಿಗೆ ಶಕ್ತಿ ತುಂಬುವ ಕೆಲಸ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಆಗಿದೆ. ವಿದ್ಯಾನಿಧಿ ಯೋಜನೆಯಡಿ 12 ಕೋಟಿ ಹಣವನ್ನು ರೈತರ ಮಕ್ಕಳಿಗೆ ಶಿಷ್ಯವೇತನ ನೀಡಲಾಗಿದೆ ಎಂದು ತಿಳಿಸಿದರು.
ಗ್ಯಾರೆಂಟಿ ಕಾರ್ಡ್‌ಗಳು ಬೋಗಸ್- ಸಿಎಂ ಗರಂ: ಪ್ರಸ್ತುತ ಕೆಲ ಗ್ಯಾರೆಂಟಿಗಳ ಮೂಲಕ ಜನರಿಗೆ ಸುಳ್ಳು ಹೇಳುವ ಕೆಲಸ ನಡೆಯುತ್ತಿದೆ. ಅಂತಹ ಗ್ಯಾರೆಂಟಿ ಕಾರ್ಡ್‌ಗಳು ಬೋಗಸ್ ಆಗಿವೆ. ವಿಸಿಟಿಂಗ್ ಕಾರ್ಡ್ ನಂತೆಯಿದ್ದ ಈ ಹಿಂದೆ ಯೋಜನೆಗಳು ಯಾಕೆ ಈಡೇರಿಲ್ಲ? ಹಿಂದಿನ ರಾಜಕಾರಣಿಗಳು ಅಧಿಕಾರದ ರಾಜಕಾರಣ ಮಾಡುತ್ತಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಮೋಸ ಮಾಡಲು ಅವಕಾಶ ನೀಡಬಾರದು. ಸ್ವಾಭಿಮಾನಿ ಬದುಕು ನಡೆಸಲು ಅವಕಾಶ ಕಲ್ಪಿಸುವವರಿಗೆ ಮಹತ್ವ ನೀಡಬೇಕು. ಕೊಡಗಿನ ಶಾಸಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಹಾಗೂ ಈ ಸರ್ಕಾರಕ್ಕೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇದೇ ಸಂದರ್ಭ ವಿವಿಧ ಫಲಾನುಭವಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೌಲಭ್ಯಗಳನ್ನು ಸಾಂಕೇತಿಕವಾಗಿ ವಿತರಿಸಿದರು. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಪ್ರತಾಪ್ ನಾಯಕ್, ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ್, ಎಸ್‌ಪಿ ರಾಮರಾಜನ್ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ: ಹೈಕಮಾಂಡ್ ಸೂಚಿಸಿದ ಕಡೆ ಸ್ಪರ್ಧಿಸುವೆ : ಸಿದ್ದರಾಮಯ್ಯ