ಕೊಡಗು : ಪೌರತ್ವ ಕಾಯ್ದೆ ಬಗ್ಗೆ ಕಾಂಗ್ರೆಸ್ ಅಲ್ಪ ಸಂಖ್ಯಾತರನ್ನು ಮುಂದಿಟ್ಟುಕೊಂಡು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ನಗರದ ಗಾಂಧಿ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಬಿಜೆಪಿ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತದಲ್ಲಿ 23 ಕೋಟಿ ಅಲ್ಪ ಸಂಖ್ಯಾತರಿದ್ದರೆ ನೆರೆಯ ಪಾಕಿಸ್ತಾನದಲ್ಲಿ 17 ಕೋಟಿ ಇದ್ದಾರೆ. ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಸತತ ಪ್ರಯತ್ನದಿಂದ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕಾಂಗ್ರೆಸ್, ಜೆಡಿಎಸ್ ಹಾಗೂ ಇತರ ಪಕ್ಷಗಳು ಸೇರಿಕೊಂಡು ಗೊಂದಲ ಸೃಷ್ಟಿಸುತ್ತಿವೆ ಎಂದು ಆರೋಪಿಸಿದರು.
ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ, ಸಿಎಎ ಕಾಯ್ದೆಯನ್ನು ಏಕಾಏಕಿ ಜಾರಿಗೆ ತಂದಿಲ್ಲ. ಬಹಳ ವಿಸ್ಕೃತ ಚರ್ಚೆಯ ಬಳಿಕ ಕಾಯ್ದೆ ಜಾರಿಗೆ ತರಲಾಗಿದೆ. ಕಾಯ್ದೆ ಜಾರಿ ಬಗ್ಗೆ ಹಿಂದೆಯೇ ಕಾಂಗ್ರೆಸ್ ದಿ.ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರ ಅವಧಿಯಲ್ಲೇ ಚರ್ಚಿಸಲಾಗಿತ್ತು. ಆದರೆ ಕಾಂಗ್ರೆಸ್, ಕಮ್ಯುನಿಸ್ಟ್ ಹೀಗೆ ಕೆಲವರು ಸೇರಿಕೊಂಡು ಕಾಯ್ದೆ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.