ಕಲಬುರಗಿ: ರಾತ್ರಿ ವೇಳೆ ಅಕ್ರಮ ಪ್ಲಾಸ್ಟಿಕ್ ಕಾರ್ಖಾನೆ ಮೇಲೆ ತಡ ರಾತ್ರಿ ಮಹಾನಗರ ಪಾಲಿಕೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ 10 ಟನ್ ಕಚ್ಚಾ ಪ್ಲಾಸ್ಟಿಕ್ಅನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಕಪನೂರ್ ಇಂಡಸ್ಟ್ರಿಯಲ್ ಪ್ರದೇಶದಲ್ಲಿರುವ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ರಾತ್ರಿ ವೇಳೆ ಅಕ್ರಮವಾಗಿ ಪ್ಲಾಸ್ಟಿಕ್ ತಯಾರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ನೇತೃತ್ವದ ತಂಡವು ತಡರಾತ್ರಿ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಕಾರ್ಖಾನೆಯಲ್ಲಿ ಸಂಗ್ರಹಿಸಿಟ್ಟಿದ್ದ 10 ಟನ್ ಕಚ್ಚಾ ಸಾಮಗ್ರಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಲ್ಲದೆ ಕಾರ್ಖಾನೆಯನ್ನು ಸೀಜ್ ಮಾಡಿದ್ದಾರೆ.
ಮನೆಯಲ್ಲಿ ಟನ್ಗಟ್ಟಲೆ ಪ್ಲಾಸ್ಟಿಕ್ ಸಂಗ್ರಹ: ಕೇವಲ ಕಾರ್ಖಾನೆಯಲ್ಲಿ ಮಾತ್ರವಲ್ಲದೆ ಮನೆಯಲ್ಲಿಯೂ ಟನ್ ಲೆಕ್ಕದಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಿಟ್ಟಿರುವುದು ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಹೈದರಬಾದ್ ನಿಂದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ನೀರಿನ ಗ್ಲಾಸ್, ಚಹಾ ಗ್ಲಾಸ್, ಹೀಗೆ ಇತ್ಯಾದಿ ಶೇ.75ರಷ್ಟು ಪ್ಲಾಸ್ಟಿಕ್ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.