ಕಲಬುರಗಿ: ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿದ್ದ ವ್ಯಕ್ತಿ ಮೃತಪಟ್ಟ ಬೆನ್ನಲ್ಲೇ ಇದೀಗ ಮತ್ತೆ 6 ಜನ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಕಮಲಾಪೂರ ತಾಲೂಕಿನ ಗೊಬ್ಬುರವಾಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಬೀಡುಬಿಟ್ಟಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.
ಕಲುಷಿತ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥ: ಗೊಬ್ಬುರವಾಡಿ ಗ್ರಾಮದಲ್ಲಿ ಕಳೆದೊಂದು ವಾರದಿಂದ ಏಕಾಏಕಿ ಗ್ರಾಮಸ್ಥರ ಆರೋಗ್ಯ ಹದಗೆಡುತ್ತದೆ. ವಾಂತಿ-ಬೇಧಿ ಹೊಟ್ಟೆ ನೋವಿನಿಂದ ಬಳಲಿ ನಿತ್ರಾಣಗೊಳ್ಳುತ್ತಿದ್ದಾರೆ. ಕುಡಿಯಲು ಯೋಗ್ಯವಲ್ಲದ ನೀರಿನಿಂದಾಗಿ ಸಮಸ್ಸೆ ತಲೆದೋರಿದೆ ಎನ್ನಲಾಗುತ್ತಿದೆ. ಈಗಾಗಲೇ ವಾಂತಿ ಬೇಧಿಯಿಂದ ಎರಡು ದಿನ ಬಳಲಿದ ಸಾಯಿಬಣ್ಣ ಭಜಂತ್ರಿ (50) ಎಂಬ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತ ಸಾಯಿಬಣ್ಣನ ಇಬ್ಬರು ಪುತ್ರಿಯರು ಕೂಡ ಅಸ್ವಸ್ಥರಾಗಿ ಚೇತರಿಸಿಕೊಂಡಿದ್ದಾರೆ. ಇದೀಗ ಗ್ರಾಮದಲ್ಲಿ ಮತ್ತೆ ಹಲವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಗ್ರಾಮದ ಕವಿತಾ, ಗಣೇಶ, ಲೋಕೇಶ್, ಬಸವರಾಜ್, ಅನ್ನಪೂರ್ಣ, ಮಹಾದೇವಿ ಎನ್ನುವವರು ಅಸ್ವಸ್ಥಗೊಂಡಿದ್ದಾರೆ.
ಗ್ರಾಮದಲ್ಲಿಯೇ ಆರೋಗ್ಯ ಅಧಿಕಾರಿಗಳು ಬೀಡುಬಿಟ್ಟಿದ್ದು, ಅಸ್ವಸ್ಥರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವೆನಿಸಿದರೆ ಆಂಬ್ಯುಲನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕಳಿಸಲಾಗುತ್ತಿದೆ. ಇನ್ನು ಮೃತ ಸಾಯಿಬಣ್ಣಾ ಚೆನ್ನಾಗಿಯೇ ಇದ್ದರು, ಆದ್ರೆ ಕೇವಲ ಎರಡು ದಿನಗಳಲ್ಲಿ ನಿತ್ರಾಣಗೊಂಡು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಸುಮಾರು ಎರಡು ಸಾವಿರ ಜನಸಂಖ್ಯೆ ಇರುವ ಗೊಬ್ಬರವಾಡಿ ಗ್ರಾಮದಲ್ಲಿ 16 ಕುಡಿಯುವ ನೀರಿನ ಮೂಲಗಳಿದ್ದು, ಇವುಗಳಲ್ಲಿ 11 ಬೋರ್ವೆಲ್ಗಳ ನೀರು ಕುಡಿಯಲು ಯೋಗ್ಯವಿಲ್ಲ ಎಂಬ ವರದಿ ಬಂದಿದೆ. ಸದ್ಯಕ್ಕೆ ಪಕ್ಕದ ಮಹಾಗಾಂವ್ ಕ್ರಾಸ್ದಿಂದ ಪಿಲ್ಟರ್ ನೀರು ಗ್ರಾಮಕ್ಕೆ ಸರಬರಾಜು ಮಾಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗ ಗ್ರಾಮದಲ್ಲಿ ಆರ್.ಓ ಪ್ಲ್ಯಾಂಟ್ ಕೂಡಾ ನಿರ್ಮಾಣ ಮಾಡಲಾಗುವುದು. ಶುಕ್ರವಾರ ಮೃತನಾದ ಸಾಯಿಬಣ್ಣ ಭಜಂತ್ರಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ವರದಿ ಬಂದ ನಂತರ ಸಾವಿಗೆ ಕಾರಣ ತಿಳಿದುಕೊಂಡು ಮುಂದಿನ ಯೋಜನೆ ರೂಪಿಸುವುದಾಗಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಬಸವರಾಜ ಮತ್ತಿಮೂಡ ತಿಳಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ಕಲುಷಿತ ನೀರು ಸೇವನೆ, 84 ಮಂದಿ ಆಸ್ಪತ್ರೆಗೆ ದಾಖಲು