ಕಲಬುರಗಿ: ನಗರದ ರಿಂಗ್ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಗಾಯಗೊಂಡು ನರಳಾಡುತ್ತಿದ್ದು, ಮೇಲ್ನೋಟದಲ್ಲಿ ಅಪಘಾತದಂತೆ ಕಂಡರೂ, ಇದು ಕೊಲೆ ಯತ್ನವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕಲಬುರಗಿ ತಾಲೂಕಿನ ಪಾಣೆಗಾಂವ್ ನಿವಾಸಿ ಮೋಹನ್ ಗಾಯಾಳು. ಮೋಹನ್ಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಆವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ತಡರಾತ್ರಿ ಕಲಬುರಗಿ ಹೊರವಲಯದ ರಿಂಗ್ ರೋಡ್ ಬಳಿ ರಸ್ತೆ ಅಪಘಾತವಾದ ಸ್ಥಿತಿಯಲ್ಲಿ ಬೈಕ್ ಹಾಗೂ ಮೋಹನ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ವಾಹನ ಅಪಘಾತವಾದಂತೆ ಕಂಡು ಬಂದಿದೆ. ಆದ್ರೆ ನಿನ್ನೆ ರಾತ್ರಿ ಕೆಲ ಯುವಕರು ಮೋಹನನ್ನು ಕರೆದುಕೊಂಡು ಹೋಗಿ ಕೊಲೆ ಯತ್ನ ನಡೆಸಿ, ಬಳಿಕ ಅಪಘಾತದ ನಾಟಕ ಸೃಷ್ಟಿಸಿರಬಹುದು ಎಂದು ಮೋಹನ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಸದ್ಯ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.