ಕಲಬುರಗಿ: ಬ್ಯೂಟಿಷಿಯನ್ ಕುತ್ತಿಗೆಗೆ ದುಪ್ಪಟ್ಟದಿಂದ ಬಿಗಿದು, ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಶಾಂತಿ ನಗರದಲ್ಲಿ ನಡೆದಿದೆ.
ಶಾಹಿನಾ ಬಾನು (35) ಕೊಲೆಯಾದ ಮಹಿಳೆ. ಬ್ಯೂಟಿಷಿಯನ್ ಆಗಿದ್ದ ಶಾಹಿನಾ ಬಾನು ಮೊದಲು ಸೈಯದ್ ಜಿಲಾನಿ ಎಂಬಾತನ ಜೊತೆ ಮದುವೆಯಾಗಿದ್ದು, ಒಂದು ಗಂಡು ಮಗು ಕೂಡ ಇದೆ. ಆದರೆ ದಂಪತಿ ನಡುವೆ ಹೊಂದಾಣಿಕೆ ಇಲ್ಲದ ಕಾರಣ ವಿಚ್ಛೇದನ ಪಡೆದಿದ್ದಾರೆ. ಶಾಹಿನಾ ಬಾನು ಜೊತೆಗೆ ಡೈವರ್ಸ್ ಪಡೆದ ಮೇಲೆ ಆಕೆಯ ಮಾಜಿ ಪತಿ ಸೈಯದ್ ಜಿಲಾನಿ ಆಕೆಯ ಸಹೋದರಿಯನ್ನು ಮದುವೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದಾನೆ.
ಇತ್ತ ಶಾಹಿನಾ ಬಾನು ಕಲಬುರಗಿಯ ಮಹಿಬೂಬ್ ನಗರದ ಶೇಕ್ ಹೈದರ್ ಎಂಬಾತನೊಂದಿಗೆ ಎರಡನೇ ಮದುವೆಯಾಗಿ ಐದಾರು ವರ್ಷ ಸಂಸಾರ ನಡೆಸಿದ್ದಾಳೆ. ತನ್ನ 2 ನೇ ದಾಪಂತ್ಯದಲ್ಲಿ ಒಂದು ಹೆಣ್ಣು ಮಗುವನ್ನು ಹೊಂದಿದ್ದಾಳೆ. ಆದರೆ ಪತ್ನಿ ಮೇಲೆ ಸಂಶಯ ಪಟ್ಟ 2ನೇ ಪತಿ ಶೇಖ್ ಹೈದರ್ ಕೂಡ ಇತ್ತೀಚಿಗಷ್ಟೆ ಶಾಹಿನಾಳನ್ನು ಬಿಟ್ಟಿದ್ದನಂತೆ. ಆದರೆ ಹೋಗುವಾಗ ಶೇಖ್ ಹೈದರ್ ತನ್ನೊಂದಿಗೆ ಮಗಳನ್ನು ಕರೆದೊಯ್ದಿದ್ದ. ಹೀಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿ ಶಾಹಿನಾ ಬಾನು ಮಗಳನ್ನು ತನ್ನ ಸುಪರ್ದಿಗೆ ಪಡೆದು ತನ್ನ ತಾಯಿಯ ಬಳಿ ಬಿಟ್ಟಿದ್ದಳು. ತಾನು ಮಾತ್ರ ಒಬ್ಬಂಟಿಯಾಗಿ ಶಾಂತಿ ನಗರದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ವಾಸವಿದ್ದಳು ಎಂದು ಮೃತಳ ತಾಯಿ ದೂರಿನಲ್ಲಿ ವಿವರಿಸಿದ್ದಾರೆ.
ಆಗಾಗ ತಾಯಿ ಹಾಗೂ ತನ್ನ ಮಕ್ಕಳನ್ನು ಭೇಟಿಯಾಗಿ ಬರುತ್ತಿದ್ದ ಶಾಹಿನಾ ಬಾನು ಅ. 20 ರಂದು ತನ್ನ ಮೊದಲ ಮಗನನ್ನು ಭೇಟಿಯಾಗಿದ್ದಾಳೆ. ಅಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ತನ್ನ ತಾಯಿಗೆ ಕರೆ ಮಾಡಿ ಮಾತಾಡಿದ್ದಾಳೆ. ನಂತರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದಾಗಿ ಗಾಬರಿಯಾದ ಮೃತಳ ತಾಯಿ ಮನೆಗೆ ಬಂದು ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮಗಳನ್ನು ಕಸಿದುಕೊಂಡಳು ಅನ್ನುವ ಕಾರಣಕ್ಕೆ ಆಕೆಯ ಎರಡನೇ ಪತಿ ಶೇಖ್ ಹೈದರ್ ಕೊಲೆ ಮಾಡಿರಬಹುದು ಎಂದು ಶಾಹಿನಾ ಬಾನು ತಾಯಿ ಹೀಮಾಮ ಬೀ ಶಂಕೆ ವ್ಯಕ್ತಪಡಿಸಿದ್ದಾರೆ.
ಹತ್ಯೆ ಸ್ಥಳಕ್ಕೆ ಪೊಲೀಸ್ ಕಮಿಷನರ್ ಚೇತನ ಆರ್, ಡಿಸಿಪಿ ಕನಿಕಾ ಸಿಕ್ರಿವಾಲ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಯಿ ಹೀಮಾಮ ಬೀ ಹೇಳಿಕೆಯಂತೆ ದೂರು ದಾಖಲಿಸಿಕೊಂಡಿರುವ ಅಶೋಕ್ ನಗರ ಠಾಣೆಯ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಭೀಮಾತಿರದಲ್ಲಿ ಮತ್ತೊಂದು ಭಯಾನಕ ಕೊಲೆ ಪ್ರಕರಣ: ಯುವಕನ ಬರ್ಬರ ಹತ್ಯೆ