ಕಲಬುರ್ಗಿ : ವರದಿಗಾಗಿ ತೆರಳಿದ್ದ ಪತ್ರಕರ್ತನ ಅಂಗಿಯ ಕಾಲರ್ ಹಿಡಿದು ಎಳೆದಾಡಿ, ಪೊಲೀಸ್ ಕಾನ್‌ಸ್ಟೆಬಲ್ ಅಸಭ್ಯ ವರ್ತನೆ ತೋರಿರುವ ಘಟನೆ ಜೇವರ್ಗಿಯಲ್ಲಿ ನಡೆದಿದೆ. ತಪ್ಪಿತಸ್ಥ ಕಾನ್‌ಸ್ಟೆಬಲ್ ಸೇವೆಯಿಂದ ಅಮಾನತ್ತುಗೊಳಿಸುವಂತೆ ಪತ್ರಕರ್ತರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ 144 ನಿಷೇಧಾಜ್ಞೆ ಜಾರಿಯಿದ್ದರೂ ಜೇವರ್ಗಿಯಲ್ಲಿ ಕೆಲ ಪ್ರಭಾವಿಗಳು, ಕಾರಹುಣ್ಣಿಮೆ ಪ್ರಯುಕ್ತ ಎತ್ತುಗಳ ಮೆರವಣಿಗೆ ಮಾಡಿದ್ದಾರೆ. ಈ ವೇಳೆ ವರದಿ ಮಾಡಲು ತೆರಳಿದ್ದ ಪತ್ರಿಕಾ ವರದಿಗಾರ ಶರಣಪ್ಪ, ತಮ್ಮ ಮೊಬೈಲ್ನಲ್ಲಿ ಫೋಟೋ ತೆಗೆದಿದ್ದಾರೆ.
ಇದನ್ನು ನೋಡಿದ ಜೇವರ್ಗಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಸಿದ್ದಣ್ಣ ಮೊಗನಟಗಾ, ಮೊಬೈಲ್ ಕಸೆದುಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ, ನೂರಾರು ಜನರ ನಡುವೆ ಶರ್ಟ್ ಕಾಲರ್ ಹಿಡಿದು ಎಳೆದಾಡಿ ಹಲ್ಲೆಗೆ ಯತ್ನಿಸಿದ್ದಾರೆ.
ಪತ್ರಕರ್ತ ಎಂದು ಹೇಳಿ ಐಡಿ ಕಾರ್ಡ್ ತೋರಿಸಿದರೂ ಅಸಭ್ಯವಾಗಿ ವರ್ತಿಸಿ, ಉದ್ದೇಶಪೂರ್ವಕ ಅವಮಾನಗೊಳಿಸಿದ್ದಾರೆ. ಆದ್ದರಿಂದ ಕಾನ್ಸ್ಟೆಬಲ್ನನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಸ್ಥಳೀಯ ಪತ್ರಕರ್ತರು ತಹಶೀಲ್ದಾರರ ಮೂಲಕ ಎಸ್ಪಿಯವರಿಗೆ ಮನವಿ ಸಲ್ಲಿಸಿದ್ದಾರೆ.