ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಮುತ್ತೂರು ಗ್ರಾಮದ ಹಲವು ಮನೆಗಳು ಮಳೆಗೆ ಧರೆಗುರುಳಿದ್ದವು. ಈ ನಿಟ್ಟಿನಲ್ಲಿ ಹಲವು ಕುಟುಂಬಗಳು ಸರ್ಕಾರಕ್ಕೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದರಂತೆ ಸರ್ಕಾರ ಮನೆ ಬಿದ್ದ ಸ್ಥಿತಿಗತಿ ಮೇಲೆ ಎ.ಬಿ.ಸಿ.ಡಿ ವಿಭಾಗ ಮಾಡಿ ಸಂತ್ರಸ್ತರಿಗೆ ಪರಿಹಾರ ನೀಡಿದೆ.
25 ಕ್ಕೂ ಅಧಿಕ ಮನೆಗಳಿಗೆ ಸರ್ಕಾರದಿಂದ ಪರಿಹಾರ ಹಣ ಸಿಕ್ಕಿದೆ. ಆದರೆ, ಮುತ್ತೂರು ಗ್ರಾಮದ ಐದು ಕುಟುಂಬಗಳಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ. ಇದಕ್ಕೆ ಗ್ರಾಮ ಪಂಚಾಯತ್ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ ಮುತ್ತೂರು ಗ್ರಾಮದ ಐದು ಕುಟುಂಬಗಳು ವಿಭಿನ್ನ ಪ್ರತಿಭಟನೆಗೆ ಇಳಿದಿವೆ.
ಐದು ಕುಟುಂಬಗಳ ಸದಸ್ಯರು ತಲೆಯ ಮೇಲೆ ಕಲ್ಲು ಹೊತ್ತುಕೊಂಡು ಗ್ರಾಮ ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿವೆ. ಅಲ್ಲದೆ, ಮನೆಯಲ್ಲಿರುವ ಕುರಿಗಳ ಹಿಂಡನ್ನು ಹೊಡೆದುಕೊಂಡು ಗ್ರಾಮ ಪಂಚಾಯತ್ ಕಾರ್ಯಾಲಯದ ಮುಂದೆ ನಿಲ್ಲಿಸಿವೆ. ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಚಿಕ್ಕದಾದ ಗುಡಿಸಲು ಹಾಕಿಕೊಂಡು ಅಲ್ಲಿ ಉಳಿದುಕೊಂಡಿವೆ.
ಪರಿಹಾರ ಬಂದಿಲ್ಲ: ಗ್ರಾಮದಲ್ಲಿ ಎಲ್ಲರಂತೆ ನಮ್ಮ ಮನೆಗಳು ಬಿದ್ದಿವೆ. ಈ ಕುರಿತಂತೆ ಅಧಿಕಾರಿಗಳಿಗೆ ತಿಳಿಸಿದರೆ ಇಲ್ಲದ ಸಬೂಬು ಹೇಳುತ್ತಾರೆ ಎಂದು ಮನೆ ಕಳೆದುಕೊಂಡ ಕುಟುಂಬಗಳ ಸದಸ್ಯರು ಆರೋಪಿಸಿದ್ದಾರೆ. ಅಲ್ಲದೆ, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲು ಗ್ರಾಮ ಪಂಚಾಯತ್ ಅಧಿಕಾರಿಗಳು ಹಣ ಕೇಳಿದ್ದರು. ಅವರಿಗೆ ಹಣ ನೀಡದ ಕಾರಣ ನಮ್ಮ ಮನೆಗಳಿಗೆ ಪರಿಹಾರ ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಲ್ಲು ಹೊತ್ತುಕೊಂಡು ಪ್ರತಿಭಟನೆ: ನಾವು ದಿನನಿತ್ಯ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇಂಥದ್ರಲ್ಲಿ ಇವರಿಗೆ ಹಣ ಎಲ್ಲಿಂದ ತರೋಣಾ? ಎನ್ನುತ್ತಿವೆ ಈ ಕುಟುಂಬಗಳು. ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಕೊಟ್ಟು ಕೊಟ್ಟು ಸಾಕಾಗಿದೆ. ಈ ಹಿನ್ನೆಲೆಯಲ್ಲಿ ಈ ರೀತಿ ತಲೆಯ ಮೇಲೆ ಕಲ್ಲುಹೊತ್ತುಕೊಂಡು ಪ್ರತಿಭಟನೆ ನಡೆಸುತ್ತಿರುವುದಾಗಿ ಪ್ರತಿಭಟನಾನಿರತರು ಹೇಳಿದರು.
ಅಧಿಕಾರಿಗಳೇ ಕಾರಣ: ಮೊದಲು ಅರ್ಜಿ ಹಾಕಿ ಎಂದರು. ನಂತರ ಬಾಂಡ್ ತರಲು ಹೇಳಿದರು. ಅವರು ಹೇಳಿದಂತೆ ನಾವು ಕೇಳಿದ್ದೇವೆ. ಅಲ್ಲದೆ, ಅವರು ಕೇಳಿದ ಎಲ್ಲ ದಾಖಲೆಗಳನ್ನ ನೀಡಿದ್ದೇವೆ. ಆದರೂ ಸಹ ತಮಗೆ ಪರಿಹಾರ ಬಂದಿಲ್ಲ. ಇದಕ್ಕೆಲ್ಲ ಗ್ರಾಮ ಪಂಚಾಯತ್ ಅಧಿಕಾರಿಗಳೇ ಕಾರಣ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಕಾರಿಗೆ ಕಾಂಗ್ರೆಸ್ ಕುತಂತ್ರಿಗಳೇ ಮೊಟ್ಟೆ ಎಸೆದಿದ್ದಾರೆ: ಎಂ ಪಿ ರೇಣುಕಾಚಾರ್ಯ