ಹಾವೇರಿ: ಜಿಲ್ಲೆಯಲ್ಲಿರುವ ಅಲೆಮಾರಿ ಜನಾಂಗಗಳಲ್ಲಿ ಒಂದಾದ ಸುಡುಗಾಡು ಸಿದ್ದರು ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹಾವೇರಿ ನಗರದಲ್ಲಿ 36ಕ್ಕೂ ಅಧಿಕ ಸುಡುಗಾಡ ಸಿದ್ದರ ಕುಟುಂಬಗಳ ಮೇಲೆ ಕೊರೊನಾ ಕರಿಛಾಯೆ ಬಿದ್ದಿದೆ.
ಒಂದು ಕಡೆ ಮೂಲವೃತ್ತಿ ಕೈಹಿಡಿಯುತ್ತಿಲ್ಲ. ಬೇರೆ ಕೆಲಸ ಮಾಡಿ ಹೊಟ್ಟೆ ತುಂಬಿಕೊಳ್ಳೂಣ ಅಂದರೆ ಕೆಲಸ ಸಿಗುತ್ತಿಲ್ಲ. ಅಧಿಕಾರಿಗಳು ಒಮ್ಮೆ ಭೇಟಿ ನೀಡಿ ಎರಡು-ಮುರು ದಿನಕ್ಕಾಗುವಷ್ಟು ವಸ್ತುಗಳನ್ನು ನೀಡಿ ಮತ್ತೆ ಈ ಕಡೆ ಮುಖಮಾಡಿಲ್ಲ. ಹೀಗಾದ್ರೆ ನಾವು ಹೇಗೆ ಬದುಕಬೇಕು ಎನ್ನುತ್ತಿದ್ದಾರೆ ಸುಡುಗಾಡು ಸಿದ್ದರು.
ಹಾವೇರಿ ನಗರದ ಹೊರವಲಯದಲ್ಲಿರುವ ಸುಡುಗಾಡು ಸಿದ್ದರು, ಕಳೆದ ವರ್ಷ ಅತಿವೃಷ್ಠಿಯಿಂದ ಮನೆಕಳೆದುಕೊಂಡು ತಗಡಿನ ಶೆಡ್‌ನಲ್ಲಿ ವಾಸವಾಗಿದ್ದಾರೆ. ಇದೀಗ ಈ ಕುಟುಂಬಗಳಿಗೆ ಕುಟುಂಬಗಳಿಗೆ ಕೊರೊನಾ ಬರಸಿಡಿಲಿನಂತೆ ಅಪ್ಪಳಿಸಿದೆ. ಸಿದ್ದರ ಮೂಲವೃತ್ತಿಯಾದ ಜಾದೂ ಮೋಡಿ ಕಲೆಗಳು ಮೂಲೆಗುಂಪಾಗಿದೆ. ಬೇರೆ ಕಡೆ ಕೆಲಸಕ್ಕೆ ಹೋಗುತ್ತಿದ್ದ ಸಿದ್ದರಿಗೂ ಕೊರೊನಾ ಲಾಕ್ ಡೌನ್ ಕೆಲಸವಿಲ್ಲದಂತೆ ಮಾಡಿದೆ.
ಸುಡಾಗಾಡು ಸಿದ್ದರ 36 ಕುಟುಂಬಗಳಿದ್ದು, ಪ್ರತಿ ಕುಟುಂಬದಲ್ಲಿ 5ರಿಂದ 8 ಜನ ಸದಸ್ಯರಿದ್ದಾರೆ. ಕೊರೊನಾ ಲಾಕ್ ಡೌನ್ ಆರಂಭದಲ್ಲಿ ಒಂದು ಬಾರಿ ಈ ಕಡೆ ಬಂದಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತೆ ಈ ಕಡೆ ಬಂದಿಲ್ಲ. ಈಗಲಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ನೋವಿಗೆ ಸ್ಪಂಧಿಸುವಂತೆ ಸುಡುಗಾಡು ಸಿದ್ದರು ಮನವಿ ಮಾಡಿದ್ದಾರೆ. ಸರ್ಕಾರದ ಜೊತೆ ಸಂಘಸಂಸ್ಥೆಗಳು ನೆರವಿನ ಹಸ್ತ ಚಾಚುವಂತೆ ಕೇಳಿಕೊಂಡಿದ್ದಾರೆ.