ಹಾವೇರಿ: ಕೊರೊನಾ ಲಾಕ್ಡೌನ್ ಸಮಯವನ್ನ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಹಾವೇರಿಯ ನಾಗೇಂದ್ರನಮಟ್ಟಿ ಶಾಲೆಯ ಶಿಕ್ಷಕರು ಗಮನ ಸೆಳೆದಿದ್ದಾರೆ.
ಶಾಲೆಯ ಐದು ಶಿಕ್ಷಕರು ಶಾಲೆಯಲ್ಲಿ ಶ್ರಮದಾನ ಮಾಡುವ ಮೂಲಕ 10 ಸಾವಿರ ಲೀಟರ್ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಉಳಿದ ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ಹಾವೇರಿಯ ನಾಗೇಂದ್ರನಮಟ್ಟಿ ಜಿಲ್ಲಾ ಕೇಂದ್ರದಲ್ಲಿಯೇ ಹಿಂದುಳಿದ ಪ್ರದೇಶ. ಈ ಪ್ರದೇಶದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ನಗರದಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳಿರುವ ಶಾಲೆ. 360ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಈ ಶಾಲೆ ಹಲವು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಅದರಲ್ಲಿ ಕುಡಿಯುವ ನೀರಿನ ಸಮಸ್ಯೆ ಕೂಡ ಒಂದು. ಈ ಸಮಸ್ಯೆ ಅರಿತ ಶಾಲೆಯ ಶಿಕ್ಷಕರು ಲಾಕ್ಡೌನ್ ಸಮಯದಲ್ಲಿ ಶ್ರಮದಾನ ಮಾಡುವ ಮೂಲಕ ಮಕ್ಕಳಿಗೆ ಕುಡಿವ ನೀರಿನ ಟ್ಯಾಂಕ್ ಕಟ್ಟಿದ್ದಾರೆ. ಪೆನ್ನು ಚಾಕ್ಪೀಸ್ ಹಿಡಿಯುವ ಕೈಗಳು ಗುದ್ದಲಿ ಸಲಕೆ ಹಿಡಿದು 10 ಸಾವಿರ ಲೀಟರ್ ನೀರು ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿವೆ.
ಶಾಲೆಯಲ್ಲಿ 5 ಜನ ಶಿಕ್ಷಕರಿದ್ದಾರೆ. ಈ ಐದು ಜನ ಸೇರಿಕೊಂಡು ಲಾಕ್ಡೌನ್ ಸಮಯದಲ್ಲಿ ಟ್ಯಾಂಕ್ ನಿರ್ಮಿಸಿದ್ದಾರೆ. ಶಿಕ್ಷಕರ ಈ ಕಾರ್ಯಕ್ಕೆ ಸ್ಥಳೀಯರು ಸಹ ಕೈಜೋಡಿಸಿದ್ದಾರೆ. ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಗೌಂಡಿಯಾಗಿ ಕಾರ್ಯನಿರ್ವಹಿಸುವ ಮೂಲಕ ಟ್ಯಾಂಕ್ ನಿರ್ಮಿಸಿದ್ದಾರೆ.
ಅತಿಹೆಚ್ಚು ಮಕ್ಕಳಿರುವ ಈ ಶಾಲೆಗೆ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಶಿಕ್ಷಕರು ಶ್ರಮದಾನವಲ್ಲದೇ ಸ್ವಂತ ಹಣ ಸಹ ಖರ್ಚು ಮಾಡಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಶಾಲೆಗೆ ಶೌಚಾಲಯ ಸಹ ನಿರ್ಮಿಸುವ ಚಿಂತನೆಯಲ್ಲಿದ್ದಾರೆ. ಲಾಕ್ಡೌನ್ ಸಮಯವನ್ನು ಈ ರೀತಿ ಸಹ ಸದುಪಯೋಗಪಡಿಸಿಕೊಳ್ಳಬಹುದು ಎನ್ನುವುದಕ್ಕೆ ನಾಗೇಂದ್ರನಮಟ್ಟಿ ಶಾಲೆಯ ಶಿಕ್ಷಕರು ಇತರರಿಗೆ ಮಾದರಿಯಾಗಿದ್ದಾರೆ.