ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಗಡೇಗುಂಡಿಯಲ್ಲಾಪುರದಲ್ಲಿ 50 ಮನೆಗಳಿದ್ದು ಒಟ್ಟು ಜನಸಂಖ್ಯೆ ಎರಡು ನೂರು ಮಾತ್ರ. ಸೂಕ್ತ ವಿದ್ಯಾರ್ಥಿಗಳು ಮತ್ತು ಶಾಲೆಯ ವಾತಾವರಣ ಸರಿಯಿಲ್ಲ ಎನ್ನುವ ಕಾರಣಕ್ಕೆ ಇಲ್ಲಿ ಸ್ಥಾಪನೆಯಾಗಿದ್ದ ಕಿರಿಯ ಪ್ರಾಥಮಿಕ ಶಾಲೆಯನ್ನ ಶಿಕ್ಷಣ ಇಲಾಖೆ 2008 ಮತ್ತು 2009 ರ ಶೈಕ್ಷಣಿಕ ವರ್ಷದಲ್ಲಿ ಬಂದ್ ಮಾಡಲು ಮುಂದಾಗಿತ್ತು. ಆದರೆ ಸ್ಕೂಲ್ಗೆ ಹೊಸದಾಗಿ ಬಂದ ಶಿಕ್ಷಕರೊಬ್ಬರು ಶಾಲೆಯ ವಾತಾವರಣವನ್ನೇ ಬದಲಾಯಿಸಿದ್ದಾರೆ.
ಹೌದು, ಹೊಸದಾಗಿ ಬಂದ ಶಿಕ್ಷಕ ಜಗದೀಶ್ ಗುಳಿ ಅವರು ಬಯಲು ಪ್ರದೇಶದಲ್ಲಿರುವ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಶಾಲೆಯ ವಾತಾವರಣವೇ ಬದಲಾಗಿದೆ. ಮೊದಲ ವರ್ಷ ಸ್ವಲ್ಪ, ಎರಡನೇಯ ವರ್ಷ ಇನ್ನಷ್ಟು ಹೀಗೆ ಪ್ರತಿ ವರ್ಷ ಗಿಡಗಳನ್ನು ಗ್ರಾಮಸ್ಥರ ಸಹಾಯದಿಂದ ಹಚ್ಚಲಾರಂಭಿಸಿದರು. ಪರಿಣಾಮ ಶಾಲೆಯ ಬಯಲು ವಾತಾವರಣ ಹೋಗಿ ಹಸಿರು ವಾತಾವರಣ ನಿರ್ಮಾಣವಾಗಿದೆ. ಮೊದಲು ಬಿಸಿಲಿಗೆ ಬೇಸತ್ತು ಬೇರೆ ಕಡೆ ಹೋಗುತ್ತಿದ್ದ ವಿದ್ಯಾರ್ಥಿಗಳು ಇದೀಗ ಶಾಲೆಯ ಕಡೆ ಮುಖಮಾಡುವಷ್ಟು ಸ್ಕೂಲ್ ಪರಿಸರ ಆಹ್ಲಾದಕರವಾಗಿದೆ.
ಅಡಿಕೆ, ತೆಂಗು, ಸಂಪಿಗೆ ಸೇರಿದಂತೆ ದಾಸವಾಳ, ಗೌರಿ, ಕಾಗದ ಹೂವು ಹಾಗೂ ಅಲಂಕಾರಿಕ ಸಸ್ಯಗಳು ಶಾಲೆಯ ಸೌಂದರ್ಯವನ್ನ ಇಮ್ಮಡಿಗೊಳಿಸಿವೆ. ಶಾಲೆಗೆ ಬರುತ್ತಿದ್ದಂತೆ ನಾಣ್ನುಡಿಗಳ ಗಾದೆ ಮಾತುಗಳು, ಗಣ್ಯರ ಹೇಳಿಕೆಗಳು ನೋಡುಗರನ್ನ ಬೇರೊಂದು ಲೋಕಕ್ಕೆ ಕರೆದೊಯ್ಯುತ್ತವೆ. ಶಾಲೆಯಲ್ಲಿ ಲಾನ್‌ಗಳನ್ನು ಮಾಡಲಾಗಿದ್ದು. ಇಲ್ಲಿ ವಿದ್ಯಾರ್ಥಿಗಳು ಕುಳಿತುಕೊಂಡು ಆನಂದಿಸಬಹುದು. ಲಾನ್‌ಗಳಲ್ಲಿ ಸ್ಥಾಪಿಸಿರುವ ಪ್ರಾಣಿ, ಪಕ್ಷಿಗಳ ಚಿತ್ರಗಳು ಗಮನ ಸೆಳೆಯುತ್ತವೆ.
ಶಾಲೆಯಲ್ಲಿರುವ ಸೌಲಭ್ಯಗಳು: ಶಾಲೆಯಲ್ಲಿ ಹಾಕಲಾಗಿರುವ ಬರಹಗಳು ಅನುಭವದ ಸಾರವನ್ನು ವಿದ್ಯಾರ್ಥಿಗಳಿಗೆ ಸಾರಿ ಸಾರಿ ಹೇಳುತ್ತಿವೆ. ಜೊತೆಗೆ ಸ್ವಾಮಿ ವಿವೇಕಾನಂದ ಪ್ರತಿಮೆ, ಧ್ವಜಸ್ತಂಭ ನಿರ್ಮಿಸಲಾಗಿದೆ. ಇಲ್ಲಿಗೆ ಬರುವ ಮಕ್ಕಳು ರೈತ ಕುಟುಂಬದಿಂದ ಬರುವವರಾದ ಕಾರಣ ಶಾಲೆಯಲ್ಲಿ ಮಕ್ಕಳಿಗಾಗಿ ಎರೆಹುಳು ಗೊಬ್ಬರ ತಯಾರಿಕ ಘಟಕವಿದೆ. ರೈತರ ಮಕ್ಕಳಿಗೆ ಎರೆಹುಳು ಗೊಬ್ಬರದ ಮಹತ್ವ ತಿಳಿಯಲಿ ಎನ್ನುವ ಕಾರಣಕ್ಕೆ ಎರೆಹುಳು ಗೊಬ್ಬರ ತಯಾರಿಕ ಘಟಕ ಸ್ಥಾಪಿಸಲಾಗಿದೆ. ಮತ್ತು ಶಾಲೆಯಲ್ಲಿ ಬಳಕೆಯಾಗಿ ಉಳಿಯುವ ನೀರು ಇಂಗುಗುಂಡಿ ಸೇರುತ್ತದೆ. ಶಾಲೆಯ ಆಡುಗೆ ಮನೆಯ ಪಕ್ಕದಲ್ಲಿ ಇಂಗುಗುಂಡಿ ನಿರ್ಮಿಸಲಾಗಿದ್ದು, ಮಕ್ಕಳು ಕೈಕಾಲು ತೊಳೆದುಕೊಂಡ ನೀರು ಮತ್ತು ಅಡುಗೆ ತಯಾರಿ ಸೇರಿದಂತೆ ಬಳಕೆಯಾಗುವ ನೀರು ಬಳಿಕ ಇಂಗುಗುಂಡಿ ಸೇರುತ್ತದೆ.
ಇದನ್ನೂ ಓದಿ; ಹಾವೇರಿಯ ಸರ್ಕಾರಿ ಶಾಲೆಯಲ್ಲಿದೆ ಬ್ಯಾಂಕ್: ಮಕ್ಕಳಿಗೆ ಸಿಗುತ್ತಿದೆ ವ್ಯವಹಾರ ಜ್ಞಾನ
6 ರಿಂದ 26 ಕ್ಕೇರಿದ ವಿದ್ಯಾರ್ಥಿಗಳ ಸಂಖ್ಯೆ: ಶಾಲೆಯಲ್ಲಿ ಕಾಂಪೋಸ್ಟ್ ಗೊಬ್ಬರ ನಿರ್ಮಾಣ ಘಟಕ ಸಹ ಸ್ಥಾಪಿಸಲಾಗಿದೆ. ವಿಶೇಷವಾಗಿ ಶತ್ರುಕಸ ನಿರ್ವಹಣೆ ಘಟಕವಿದೆ. ಮಣ್ಣಿನಲ್ಲಿ ಕರಗಲಾರದ ಪ್ಲಾಸ್ಟಿಕ್ ಮತ್ತು ಗಾಜುಗಳನ್ನು ಈ ಘಟಕದಲ್ಲಿ ನಿರ್ವಹಣೆ ಮಾಡಲಾಗುತ್ತದೆ. ಶೌಚಾಲಯ ಸಹ ಸ್ವಚ್ಛತೆಯಿಂದ ಕೂಡಿದೆ. ಶಾಲೆಯಲ್ಲಿ ಮಕ್ಕಳು ಆಟವಾಡಲು ಜಾರುಬಂಡಿ, ಜೋಕಾಲಿ ನಿರ್ಮಿಸಲಾಗಿದೆ. ಆರಂಭದಲ್ಲಿ 6 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 26 ಕ್ಕೇರಿದೆ. ಗಡೇಗುಂಡಿ ಯಲ್ಲಾಪುರ ಗ್ರಾಮಸ್ಥರು ಶಾಲೆಗೆ ತನು ಮನ ಧನ ಸಹಾಯ ಮಾಡುತ್ತಿದ್ದಾರೆ.
"ಶಾಲೆಯ ಪ್ರಗತಿ ಮತ್ತು ಶಿಕ್ಷಕರ ಕಾರ್ಯ ವೈಖರಿ ನೋಡಿದ್ರೆ ಉತ್ಸಾಹ ಬರುತ್ತದೆ. ಹೊಸ ಶಿಕ್ಷಕರು ಬಂದ ನಂತರ ನಮ್ಮ ಶಾಲೆಯ ವಾತಾವರಣವೇ ಬದಲಾಗಿದೆ. ಶಾಲೆಯಲ್ಲಿ ಶಿಕ್ಷಕರು ಯಾವುದೇ ದುಂದುವೆಚ್ಚವಿಲ್ಲದೇ ತಮ್ಮ ವೇತನವನ್ನು ಸಹ ಸೇರಿಸಿ ಅಭಿವೃದ್ಧಿಗೊಳಿಸಿದ್ದಾರೆ. ಇಂತಹ ಶಿಕ್ಷಕರು ದೊರೆತಿದ್ದೇ ನಮ್ಮ ಪುಣ್ಯ. ಹೀಗಾಗಿ, ಶಾಲೆಗೆ ಎಲ್ಲಾ ರೀತಿಯ ಸಹಾಯ ಮಾಡಲು ಗ್ರಾಮಸ್ಥರು ಮುಂದೆ ಬರುತ್ತಾರೆ ಎಂದು ಸ್ಥಳೀಯರು" ತಿಳಿಸಿದ್ದಾರೆ.
ಇದನ್ನೂ ಓದಿ; ಯಾಕತಪುರ ಶಾಲೆಯಲ್ಲಿ ಸುಂದರ ಕೈತೋಟ; ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಅನುಕೂಲ
ಗ್ರಾಮಸ್ಥರಿಗೆ ಶಾಲೆಯ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದು, ರಜಾ ದಿನಗಳಲ್ಲಿ ಶಾಲೆಗೆ ಯಾರು ಬರದಂತೆ ನೋಡಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ಶಾಲೆ ಬಂದ್ ಮಾಡಲು ಮುಂದಾಗಿದ್ದ ಶಿಕ್ಷಣಾಧಿಕಾರಿಗಳೇ ಈಗ ಶಾಲೆಗೆ ಪರಿಸರಪ್ರೇಮಿ ಸೇರಿದಂತೆ ಜಿಲ್ಲಾಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯಮಟ್ಟದ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಶಾಲೆಯಲ್ಲಿ ಮಕ್ಕಳಿಗಾಗಿ ಬ್ಯಾಂಕ್ ಸಹ ತೆರೆಯಲಾಗಿದ್ದು, ಅಕೌಂಟ್ನಲ್ಲಿ 15 ಸಾವಿರಕ್ಕೂ ಅಧಿಕ ಹಣವಿದೆ. ಒಟ್ಟಾರೆಯಾಗಿ ಗಡೇಗುಂಡಿಯಲ್ಲಾಪುರ ಶಾಲೆ ತನ್ನ ವಿಶಿಷ್ಟ ಕಾರ್ಯಗಳಿಂದಾಗಿ ಜಿಲ್ಲೆಯಲ್ಲಿಯೇ ಮಾದರಿ ಕಿರಿಯ ಪ್ರಾಥಮಿಕ ಶಾಲೆಯಾಗಿದ್ದು, ಶಾಲೆಯ ಸೌಂದರ್ಯ ಸವಿಯಲು ಅಕ್ಕಪಕ್ಕದ ಗ್ರಾಮಸ್ಥರು ಭೇಟಿ ನೀಡುತ್ತಿದ್ದಾರೆ.