ಹಾಸನ : ಪಶ್ಚಿಮ ಘಟ್ಟ ಭಾಗದಲ್ಲಿ ಕಳೆದ ಕೆಳ ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಸಕಲೇಶಪುರ - ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ಮಣ್ಣು ಕುಸಿದು ಬಂದ್ ಆಗಿದ್ದ ರೈಲು ಸಂಚಾರ, ಇನ್ನೂ ಪುನಾರಂಭವಾಗಿಲ್ಲ.
ರೈಲು ಹಳಿಗಳ ಮೇಲೆ ಕುಸಿದಿರುವ ಮಣ್ಣು ಮಾತ್ರವಲ್ಲದೇ, ಸಕಲೇಶಪುರ ಶಿರವಾಗಿಲು ಸಮೀಪ ಕುಸಿಯುವ ಭೀತಿಯಲ್ಲಿದ್ದ ಹಳಿ ಪಕ್ಕದ ಬೆಟ್ಟದ ಮಣ್ಣು ಮತ್ತು ಬಂಡೆಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಆದರೆ, ಕಳೆದ 15 ದಿನಗಳಿಂದ ಈ ಭಾಗದಲ್ಲಿ ಎಡಬಿಡದೆ ಭಾರೀ ಮಳೆ ಸುರಿದ ಪರಿಣಾಮ ಕಾಮಗಾರಿ ಪೂರ್ಣಗೊಳಿಸಲು ವಿಳಂಬವಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಕಾಮಗಾರಿ ಪ್ರಗತಿಯಲ್ಲಿರುವುದರಿಂದ, ಯಾವಾಗ ರೈಲು ಸಂಚಾರ ಪುನರಾರಂಭಗೊಳ್ಳಲಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಶಿರಾಡಿ ರಸ್ತೆ ಸಂಚಾರ ಸುಗಮ: ಕಳೆದ ಕೆಲ ದಿನಗಳಿಂದ ಸುರಿದ ವಿಪರೀತ ಮಳೆಗೆ ಮಣ್ಣು ಕುಸಿದು ಸಂಚಾರಕ್ಕೆ ತೊಡಕಾಗಿದ್ದ, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ರಸ್ತೆಯಲ್ಲಿ ಸದ್ಯದ ಮಟ್ಟಿಗೆ ವಾಹನ ಸಂಚಾರ ಸುಗಮವಾಗಿದೆ. ಕಳೆದ ಬುಧವಾರ ಸಂಜೆಯಿಂದ ಈ ಭಾಗದಲ್ಲಿ ಮತ್ತೆ ಮಳೆ ಸುರಿಯಲಾರಂಭಿಸಿದ್ದರಿಂದ ರಸ್ತೆ ಸಂಚಾರಕ್ಕೆ ಪುನಃ ತೊಡಕಾಗಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ, ಗುರುವಾರ ಬೆಳಗಿನಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಸಂಚಾರಕ್ಕೆ ಯಾವುದೇ ಅಡೆತಡೆಯಾಗಿಲ್ಲ.
ಆತಂಕ: ಬೆಂಗಳೂರು - ಮಂಗಳೂರು ರೈಲು ಸಂಚಾರ ಸ್ಥಗಿತಗೊಂಡು ಸುಮಾರು 15 ದಿನಗಳೇ ಕಳೆದಿದ್ದು, ಚಾರ್ಮಾಡಿ ಘಾಟಿ ರಸ್ತೆಯು ಬಂದ್ ಆಗಿದೆ. ಶಿರಾಡಿ ಭಾಗದಲ್ಲಿ ಮತ್ತೆ ಮಳೆ ಸುರಿದು ಸಂಚಾರ ರದ್ದಾದರೆ ಕರಾವಳಿ ಭಾಗದ ಸಂಪರ್ಕಕ್ಕೆ ತೀವ್ರ ತೊಡಕಾಗಬಹುದು ಎಂಬ ಆತಂಕ ಇಲ್ಲಿನ ಜನರಿದ್ದಾರೆ.