ಹಾಸನ/ಚನ್ನರಾಯಪಟ್ಟಣ: ಅಭಿವೃದ್ಧಿ ಕುಂಠಿತವಾದಾಗ ರೇವಣ್ಣನವರು ದೇವರು ಶಾಪ ಹಾಕುತ್ತಾರೆ ಅನ್ನೋದು ಸಹಜ. ಆದರೆ ಯಾರಿಗೂ ರೇವಣ್ಣ ಕೇಡು ಬಯಸುವುದಿಲ್ಲ. ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವುದಕ್ಕೆ ರೇವಣ್ಣರ ಮಾತುಗಳು ಕಾರಣವಲ್ಲ ಎಂದು ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ನಗುನಗುತ್ತಲೇ ಪ್ರತಿಕ್ರಿಯೆ ನೀಡಿದ್ದಾರೆ.
ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರ ಬಿಜೆಪಿ ಪಕ್ಷಕ್ಕೆ ಸೇರಿದ್ದು,ಇದರ ಬಗ್ಗೆ ನಾನೇನೂ ಮಾತನಾಡಲು ಸಾಧ್ಯವಿಲ್ಲ. ರೇವಣ್ಣನವರು ಜಿಲ್ಲೆಗೆ ಅನುದಾನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಕೆಲವೊಂದು ಬಾರಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ, ದೇವರು ನಿಮ್ಮನ್ನು ನೋಡಿಕೊಳ್ಳುತ್ತಾನೆ ಎಂದು ಹೇಳಿದ್ದಾರೆ. ಹಾಗಾಗಿ ಅದು ಶಾಪವಲ್ಲ ಎಂದರು.
ಬಿಜೆಪಿ ಸರ್ಕಾರ ಐದು ವರ್ಷ ಪೂರ್ಣಗೊಂಡು, ಪಾರದರ್ಶಕವಾಗಿ ಎಲ್ಲ ಕ್ಷೇತ್ರಗಳಿಗೆ ಹಣ ಬಿಡುಗಡೆ ಮಾಡಬೇಕು. ಇನ್ನು ಸ್ಥಾನಗಳನ್ನು ಉಳಿಸಿಕೊಳ್ಳುವುದು, ಬಿಡುವುದು ಆ ಪಕ್ಷಕ್ಕೆ ಬಿಟ್ಟ ವಿಚಾರ, ಆದರೆ ಸಮಾನವಾಗಿ ಅನುದಾನ ಬಿಡುಗಡೆ ಮಾಡಬೇಕೆಂಬುದು ನಮ್ಮ ಬೇಡಿಕೆ ಅಷ್ಟೇ.
ಕೋವಿಡ್ 19 ಕಾರಣ ಹೇಳಿ ಅನುದಾನವನ್ನು ಕಡಿತಗೊಳಿಸುತ್ತಾ ಬಂದಿದ್ದರು. ಆದರೆ ಈಗ ಎರಡನೇ ಅಲೆ ತೆರವುಗೊಂಡಿದ್ದು, ಮೂರನೇ ಅಲೆ ಬರುವ ಮುನ್ಸೂಚನೆ ಇದೆ. ಆದರೆ ಬಿಜೆಪಿ ಕ್ಷೇತ್ರಗಳಿಗೆ 10 ಕೋಟಿ ಅನುದಾನ ನೀಡಿದರೆ ಕನಿಷ್ಠ ನಮಗೂ 6-8 ಕೋಟಿ ಅನುದಾನ ನೀಡಿ ಎಂದು ಮನವಿ ಮಾಡುತ್ತೇವೆ. ಕಳೆದ ಎರಡು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ ಇದನ್ನು ಮುಂದಿನ ದಿನಗಳಲ್ಲಾದರೂ ಸರಿಪಡಿಸಬೇಕು ಎಂದು ನಮ್ಮ ಮನವಿ ಎಂದು ಹೇಳಿದರು.
ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಶಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ ಪಾಟೀಲ್ ವಿಚಾರಕ್ಕೆ ಪ್ರತಿಕ್ರಿಯಿಸಿ ಅದು ಅವರ ವೈಯಕ್ತಿಕ ಎಂದರು.
ಕುಮಾರಸ್ವಾಮಿಯವರು ಮುಂದೆ ಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯ ಬಗ್ಗೆ ಪಕ್ಷ ಸಂಘಟನೆ ಮಾಡಲು ಮುಂದಾಗಿದ್ದಾರೆ. ಅವರು ಕೂಡ ರಾಜಕೀಯದ ವಿದ್ಯಮಾನಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪಕ್ಷ ಸಂಘಟನೆಗೆ ಮಾಡುವಲ್ಲಿ ಹೆಚ್ಚು ಶ್ರಮ ವಹಿಸುತ್ತಿದ್ದಾರೆ. ಹೀಗಾಗಿ ನಾಳೆ ನಡೆಯುವ ಸಿಎಂ ಬದಲಾವಣೆ ವಿಚಾರ ಅವರ ಪಕ್ಷಕ್ಕೆ ಬಿಟ್ಟದ್ದು ಹೊರತು ನಮಗೂ ಅವುಗಳಿಗೆ ಯಾವುದೇ ಸಂಬಂಧ ಇಲ್ಲ. ಆದರೆ ವೈಯಕ್ತಿಕವಾಗಿ ನಾನು ಹೇಳುವುದಿಷ್ಟೇ ಮುಖ್ಯಮಂತ್ರಿಯಾಗಿ ಅವರು ಮುಂದುವರಿದು ಸರ್ಕಾರ 5 ವರ್ಷ ಪೂರ್ಣಗೊಳಿಸಲಿ ಎಂಬುದಷ್ಟೇ ನನ್ನ ಆಶಯ ಎಂದರು.