ಹಾಸನ : ಗಣಿತ ಸಮ್ಮೇಳನಗಳು ಬೋಧನಾ ಸಾಮರ್ಥ್ಯ ಹೆಚ್ಚಿಸುವ ಮೂಲಕ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಶಾಸಕ ಬಾಲಕೃಷ್ಣ ಹೇಳಿದರು.
ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ಗಣಿತ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕರು ಕಷ್ಟಪಟ್ಟು ಬೋಧನೆ ಮಾಡುವುದಕ್ಕಿಂತ ಇಷ್ಟಪಟ್ಟು ಬೋಧನೆ ಮಾಡಿದರೆ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ. ಮುಂದೆ ಗುರಿ ಹಿಂದೆ ಗುರು ಇರಬೇಕು ಆಗ ಏನನ್ನಾದರೂ ಸಾಧಿಸಲು ಸಾಧ್ಯ. ಬದಲಾವಣೆಗೆ ತಕ್ಕಂತೆ ಬೋಧಕರು ತಮ್ಮ ಬೋಧನಾ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡಲು ಸಾಧ್ಯ ಎಂದರು.
ಇನ್ನು ಸ್ವಾರ್ಥರಹಿತ ಕ್ಷೇತ್ರವಾಗಿರುವ ಶ್ರವಣಬೆಳಗೊಳ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕವಾಗಿ ಪ್ರಪಂಚಕ್ಕೆ ಪರಿಚಯವಾಗಿದೆ. ಇದಕ್ಕೆ ಕಾರಣಕರ್ತರು ಮಠದ ಶ್ರೀ ಚಾರುಕೀರ್ತಿ ಸ್ವಾಮೀಜಿಯವರು. ಯಾವುದೇ ಸಮಾವೇಶವಾಗಲಿ, ಯಾವುದೇ ಕಾರ್ಯಕ್ರಮವಾಗಲಿ ಎಲ್ಲರಿಗೂ ಇಲ್ಲ ಎನ್ನದೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿ ಕೊಡುವ ಏಕೈಕ ಸ್ವಾಮೀಜಿಗಳೆಂದರೆ ಅದು ನಮ್ಮ ಕ್ಷೇತ್ರದ ಶ್ರೀಗಳು. ಈ ಸಮಾವೇಷ ಮಕ್ಕಳಿಗೆ ಮತ್ತು ಬೋಧಕ ವೃಂದದವರಿಗೆ ಉಪಯುಕ್ತವಾಗಿದೆ ಎಂದು ಬಣ್ಣಿಸಿದರು.
ಬಳಿಕ ಮಾತನಾಡಿದ ವಿಧಾನಪರಿಷತ್ ಸದಸ್ಯ ಹಿಮಗೋಪಾಲಸ್ವಾಮಿ, ಭವಿಷ್ಯ ಗಣಿತ ಹಿಂದಿಗಿಂತಲೂ ಈಗ ಬಹಳ ಸರಳವಾಗುತ್ತದೆ. ನಾನು ಕೂಡ ಗಣಿತ ವಿಷಯದಲ್ಲಿ ತುಂಬಾ ಹಿಂದೆ ಉಳಿದ ವಿದ್ಯಾರ್ಥಿಯಾಗಿದ್ದೆ. ಆದರೆ ಕ್ರಮೇಣ ಸುಧಾರಣೆಯಾದೆ.ಆರ್ಥಿಕ ವಲಯದಲ್ಲಿ ಲೆಕ್ಕ ಬಹಳ ಮುಖ್ಯ. ಹಾಗಾಗಿ ಸಮ್ಮೇಳನದಲ್ಲಿ ಬಂದಂತಹ ವಿದ್ಯಾರ್ಥಿಗಳಿಗೆ ಗಣಿತ ಮಹತ್ವ ತಿಳಿಸುವ ಕೆಲಸವನ್ನು ಶಿಕ್ಷಕರ ಮಾಡಬೇಕೆಂದರು.