ಹಾಸನ: "ಇಂದು ನಿಷ್ಠೆ ಎನ್ನುವುದು ಯಾವುದೇ ಪಕ್ಷದಲ್ಲೂ ಉಳಿದಿಲ್ಲ. ಕೇವಲ ತಕ್ಷಣಕ್ಕೆ ಸಿಗುವ ಅಧಿಕಾರಕ್ಕೆ ಮರುಳಾಗುತ್ತಾರೆ" ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. "1999ರಲ್ಲಿ ಆಪರೇಷನ್ ಹಸ್ತ ಮಾಡಿದ್ದ ಎಸ್.ಎಂ.ಕೃಷ್ಣ ನಮ್ಮಿಂದ ಐವರನ್ನು, ಬಿಜೆಪಿಯಿಂದ 8-10 ಜನರನ್ನು ಕರೆದುಕೊಂಡು ಹೋಗಿದ್ದರು. ನಂತರ ಅವರ ಸ್ಥಿತಿ ಎಲ್ಲಿಗೆ ಬಂತು?. ಬಿಜೆಪಿಯವರು ಆಪರೇಷನ್ ಕಮಲ ಮಾಡಿ 40 ಸೀಟ್ಗೆ ತೃಪ್ತಿಪಟ್ಟರು. 2013-2014ರಲ್ಲಿ ಸಿದ್ದರಾಮಯ್ಯ ಆಪರೇಷನ್ ಆಟವಾಡಿ 2018ರಲ್ಲಿ 78ಕ್ಕೆ ಬಂದು ನಿಂತಿದ್ದರು. ಹೀಗಾಗಿ, ಇತ್ತೀಚೆಗೆ ನಿಷ್ಠೆ ಎಂಬುದು ಯಾವುದೇ ಪಕ್ಷದಲ್ಲೂ ಉಳಿದಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಆಪರೇಷನ್ ಕಮಲದಿಂದ ಯಾರು ಏನಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಇವತ್ತಿನ ರಾಜಕೀಯ ನಾಯಕರುಗಳಿಗೆ ನಿಷ್ಠೆ ಎಂಬುದಿಲ್ಲ. ಕ್ಷಣಿಕ ಅಧಿಕಾರಕ್ಕಾಗಿ ಪಕ್ಷಾಂತರ ಮಾಡುತ್ತಿದ್ದಾರೆ" ಎಂದು ಬೇಸರಿಸಿದರು. ಗ್ಯಾರಂಟಿ ಯೋಜನೆಯಿಂದ ಎಷ್ಟು ಜನರಿಗೆ ಉಪಯೋಗವಾಗಿದೆ?. ಅದಾನಿ, ಅಂಬಾನಿಯವರ ಹಣವನ್ನು ಜನರಿಗೆ ಹಂಚುತ್ತೇನೆ ಎಂದಿದ್ದಾರೆ. ನೋಡೋಣ ಏನು ಮಾಡುತ್ತಾರೆಂದು. ಗೃಹ ಜ್ಯೋತಿ ಹೆಸರಿನಲ್ಲಿ ಈಗಾಗಲೇ ಅನೇಕರಿಗೆ ಪೆಟ್ಟು ಬಿದ್ದಿದೆ. ಆಗಸ್ಟ್ನಲ್ಲೇ ಲೋಡ್ ಶೆಡ್ಡಿಂಗ್ ಆರಂಭವಾಗಿದೆ" ಎಂದು ಟೀಕಿಸಿದರು.
ಕಾವೇರಿ ನೀರು ವಿವಾದ: "ಕಾವೇರಿ ವಿಚಾರವಾಗಿ ನಿಲುವನ್ನು ಸರ್ವಪಕ್ಷ ಸಭೆಯಲ್ಲಿಯೇ ಸ್ಪಷ್ಟಪಡಿಸಿದ್ದೇನೆ. ಕಾವೇರಿ ಮ್ಯಾನೇಜ್‌ಮೆಂಟ್ ನೀರು ಬಿಡಿ ಎಂದಾಗಲೇ ಸರ್ವಪಕ್ಷ ಸಭೆ ಕರೆದು ಚರ್ಚಿಸಬೇಕಾಗಿತ್ತು. ಈ ಕುರಿತು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದಾಗ ತೀರ್ಪು ಬರೋವರೆಗೂ ಕಾಯದೆ ಸರ್ಕಾರ ನೀರು ಪೂರೈಕೆ ಮಾಡಿದೆ. ಪ್ರತಿಭಟಿಸುವ ರೈತರ ಮೇಲೆಯೇ ಕೇಸ್ ಹಾಕಿ ಎಂದಿದ್ದಾರೆ. ಈ ರೀತಿಯ ವರ್ತನೆ ಸರಿಯಲ್ಲ ಎಂದು ಹೇಳಿದ್ದೇನೆ" ಎಂದರು.
"ಬರ ಘೋಷಣೆ ಮಾನದಂಡ ಪರಿಷ್ಕರಣೆಯನ್ನು ಈ ಕೂಡಲೇ ಕೈಬಿಡಬೇಕು. ಈಗಿರುವ ಮಾನದಂಡವೂ ಮೊದಲಿನಿಂದಲೂ ಇರುವುದರಿಂದ ಇದನ್ನೇ ಪಾಲಿಸಬೇಕು. ಬಹಳ ಜನರು ಇವರ ತಪ್ಪುಗಳ ಬಗ್ಗೆ ಕಠಿಣವಾಗಿ ಮಾತನಾಡಬೇಡಿ ಎನ್ನುತ್ತಾರೆ, ಮಾತನಾಡದೇ ಹೋದಲ್ಲಿ ಇವರ ತಪ್ಪುಗಳ ಬಗ್ಗೆ ಹೇಳುವವರಾರು?. ಈಗಲೇ ಸರ್ಕಾರಕ್ಕೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ" ಎಂದು ಹೇಳಿದರು.
ಮುಂದುವರೆದು ಮಾತನಾಡಿ, "ವಿಜ್ಞಾನಿಗಳ ಅವಿರತ ಶ್ರಮದಿಂದ ಚಂದ್ರಯಾನ-3 ಯಶಸ್ವಿಯಾಗಿದೆ. ಅವರ ಕೆಲಸಕ್ಕೆ ವಿದೇಶದಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈಗ ಎಲ್ಲರೂ ಚಂದ್ರಯಾನ ಗುಂಗಿನಲ್ಲಿದ್ದಾರೆ, ಹಾಗಾಗಿ ರಾಜಕೀಯ ಕುರಿತು ಹೆಚ್ಚು ಮಾತನಾಡುವುದಿಲ್ಲ" ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸಿಗರಿಗೆ ಜನಸಾಮಾನ್ಯರ ಜೊತೆ ಇದ್ದರೆ ಕೀಳರಿಮೆಯ ಭಾವನೆ ಬರುತ್ತದೆ: ಸಿ ಟಿ ರವಿ