ಹಾಸನ: ಚನ್ನರಾಯಪಟ್ಟಣದಲ್ಲಿ ನಡೆದ ಗುಂಡಿನ ಕಾಳಗದ ಪ್ರಕರಣ ಹಿನ್ನೆಲೆ, ಈಗಾಗಲೇ ಆರೋಪಿಗಳು ಯಾರು ಎಂಬುದು ಗೊತ್ತಾಗಿದೆ. ಆದರೆ ತನಿಖೆಯಿಂದ ಮತ್ತಷ್ಟು ಬಹಿರಂಗವಾಲಿದ್ದು, 2-3 ದಿನದಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ 6 ಮಂದಿಯನ್ನು ವಿಚಾರಣೆಗೊಳಪಡಿಸಿದ್ದು, ಇನ್ನೆರಡು ದಿನದಲ್ಲಿ ಹೆಚ್ಚಿನ ತನಿಖೆ ನಡೆಸಿ ಕೃತ್ಯವೆಸಗಿದವರನ್ನು ಬಂಧಿಸಲಾಗುವುದು.
ಬೆಂಗಳೂರಿನ ನಂಬರ್ ಪ್ಲೇಟ್ ಇರುವ ಕಾರು ಹಾಗೂ ಮತ್ತೊಂದು ಹಾಸನ ಜಿಲ್ಲೆಯ ನಂಬರ್ ಪ್ಲೇಟ್ ಕಾರಿನಲ್ಲಿ ಬಂದಿದ್ದ ತಂಡ ಮತ್ತೊಬ್ಬ ರೌಡಿಶೀಟರ್ ಇದ್ದ ಕಾರಿನ ಮೇಲೆ ಗುಂಡಿನ ಕಾಳಗ ನಡೆಸಿದೆ.
ಇನ್ನು ಬೆಂಗಳೂರು ಮೂಲದ ರೌಡಿಗಳಿಗಿಂದ ಹಾಸನದ ಕೆಲವು ರೌಡಿಶೀಟರ್ಗಳು ಕಾರಿನಲ್ಲಿದ್ದರು ಎಂಬ ಮಾಹಿತಿ ಇದೆ. ಹೆಚ್ಚಿನ ತನಿಖೆಯಲ್ಲಿ ಬೆಂಗಳೂರಿನ ಭೂಗತ ಲೋಕದ ಪಾತಕಿಗಳಿರಲಿ, ತುಮಕೂರು ಜಿಲ್ಲೆಯ ಪಾತಕಿಗಳಿರಲಿ ಯಾರನ್ನು ಬಿಡದೇ ಕಾನೂನಿನ ಪ್ರಕಾರ ಶಿಕ್ಷೆಗೆ ಒಳಪಡಿಸಲಾಗುವುದು.
ಇನ್ನು ಜಿಲ್ಲೆಯಲ್ಲಿ ರೆಮ್ಡೆಸಿವಿಯರ್ ಚುಚ್ಚುಮದ್ದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದು, ಇದರ ಬಗ್ಗೆ ದೂರು ಬಂದ ಹಿನ್ನೆಲೆ, ಪ್ರಕರಣವನ್ನು ಡಿಸಿಆರ್ ಬಿಗೆ ವರ್ಗಾವಣೆ ಮಾಡಿದ್ದೇನೆ. ಯಾರೇ ತಪ್ಪು ಮಾಡಿದರೂ ಕಾನೂನಿನಡಿ ಶಿಕ್ಷೆ ಖಚಿತ. ಈಗಾಗಲೇ ಎರಡು ಗುಪ್ತಚರ ದಳದ ತಂಡಗಳನ್ನು ರಚನೆ ಮಾಡಿದ್ದೇವೆ.
ಆಮ್ಲಜನಕ ಕೊರತೆ ನೀಗಿಸಲು ಜಿಲ್ಲಾಡಳಿತ ಶ್ರಮಿಸುತ್ತಿದ್ದು, ನಮ್ಮ ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ಆಮ್ಲಜನಕ ಆಮದು ಮತ್ತು ರಫ್ತು ಮಾಡುವ ಸ್ಥಳದಲ್ಲಿ ನಿಯೋಜನೆ ಮಾಡಿದ್ದು, ಕಾರ್ಯ ಪ್ರವೃತ್ತರಾಗಿದ್ದಾರೆ ಎಂದರು.