ಗದಗ : ಗದಗ, ಬೆಟಗೇರಿ ನಗರದ ಜನರಿಗೆ ಬೆಳಕು ನೀಡುವ, ನಗರಸಭೆ ಈಗ ತಾನೇ ಕತ್ತಲಲ್ಲಿ ಮುಳುಗಿದೆ. ಕಳೆದ ಒಂದು ವಾರದಿಂದ ಕರೆಂಟ್ ಇಲ್ಲದೆ ಅಧಿಕಾರಿಗಳು ಬಂದ ಪುಟ್ಟ ಹೋದ ಪುಟ್ಟ ಎನ್ನುವ ಮನಸ್ಥಿತಿಯಲ್ಲಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಹೌದು, ಕಚೇರಿಗೆ ಬರೋದು ಸಹಿ ಹಾಕೋದು, ಮನೆಗೆ ವಾಪಸ್ ಹೋಗೋದು. ಯಾರಾದರೂ ಏನಾದರೂ ಪ್ರಶ್ನೆ ಮಾಡಿದರೆ ಕರೆಂಟ್ ಇಲ್ಲರಿ ಏನ್ಮಾಡೋದು ಅಂತ ಸಲೀಸಾಗಿ ಹೇಳಿಬಿಡೋದು. ಹಾಗಾಗಿ ಆಫೀಸ್ ನಲ್ಲಿ ಬರೀ ಖುರ್ಚಿಗಳೇ ಕಾಣಸಿಗುತ್ತವೆ. ಇತ್ತ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು ಕಚೇರಿಗೆ ಅಲೆದಾಡಿ ಅಲೆದಾಡಿ ಸುಸ್ತಾಗಿದ್ದಾರೆ.
ನಗರಸಭೆಯಲ್ಲಿ ಒಂದು ವಾರದಿಂದ ವಿದ್ಯುತ್ ಸಂಪರ್ಕ ಕಡಿತವಾಗಿದ್ದರಿಂದ ಸಾರ್ವಜನಿಕರು ಪರದಾಡುತ್ತಿದ್ದಾರೆ. ಬಿಲ್ ಕಟ್ಟುವವರು, ಉತಾರ್ ಪಡೆಯುವವರು ಬೇರೆ ಬೇರೆ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು ಅಲೆದಾಡು ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ವೃದ್ಧರು ಕಳೆದ ಒಂದು ವಾರದಿಂದ ನಗರಸಭೆ ಕಚೇರಿಗೆ ಅಲೆದಾಡಿ ಅಲೆದಾಡಿ ಯಾವ ಕೆಲಸವೂ ಆಗದೆ ಸುಸ್ತಾಗಿದ್ದಾರೆ. ಅಧಿಕಾರಿಗಳನ್ನ ಕೇಳಿದರೆ ಕರೆಂಟ್ ಇಲ್ಲರಿ ನಾವೇನ್ ಮಾಡೋಣ. ಕರೆಂಟ್ ಯಾವಾಗ ಬರ್ತದೋ ನಮಗೂ ಗೊತ್ತಿಲ್ರಿ ಅಂತ ವಾಪಸ್ ಕಳಿಸುತ್ತಿದ್ದಾರಂತೆ. ಇತ್ತ ಕೂಲಿ ನಾಲಿ ಕೆಲಸ ಮಾಡೋದು ಬಿಟ್ಟು ಬಂದರೆ ಇತ್ತ ಉತಾರನೂ ಇಲ್ಲ ಕೂಲಿನೂ ಇಲ್ಲ ಅಂತಿದ್ದಾರೆ ಅಂತ ಜನರು ಗೋಳಾಡುತ್ತಿದ್ದಾರೆ. ಕಚೇರಿಯಲ್ಲಿ ಕರೆಂಟ್ ಇಲ್ಲ ಅಂತ ಅಧಿಕಾರಿಗಳು ಸಹ ಕಚೇರಿಗೆ ಬಂದಿಲ್ಲ. ಕಚೇರಿಗಳಲ್ಲಿ ಕೇವಲ ಖಾಲಿ ಕುರ್ಚಿಗಳೇ ಕಾಣಸಿಗುತ್ತವೆ. ಹೀಗಾಗಿ ಜನರು ಬಂದ ದಾರಿಗೆ ಸುಂಕ ಇಲ್ಲ ಅಂತ ವಾಪಸ್ ಮನೆ ದಾರಿ ಹಿಡಿದಿದ್ದಾರೆ.
ಓದಿ : 'ನೀವು ದನ ಕೊಲ್ಲುವವರು, ನಾವು ದನ ಕಾಯುವವರು': ಕಾಂಗ್ರೆಸ್ಗೆ ಬೊಮ್ಮಾಯಿ ತಿರುಗೇಟು
ಇನ್ನು ನಗರಸಭೆ ಇರುವ ಏರಿಯಾದಲ್ಲಿ ವಿದ್ಯುತ್ ದುರಸ್ತಿ ಕಾರ್ಯ ನಡೆದಿದೆಯಂತೆ. ಆ ದುರಸ್ತಿ ಕಾರ್ಯ ಮುಗಿಯೋವರೆಗೂ ಇಲ್ಲಿ ಇದೇ ಪರಿಸ್ಥಿತಿ ಮುಂದುವರಿಯಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸರಿ ಸುಮಾರು ಇನ್ನು ಮೂರು ತಿಂಗಳು ಇದೇ ಪರಿಸ್ಥಿತಿ ಇಲ್ಲಿ ನಿರ್ಮಾಣವಾದರೆ ಏನು ಗತಿ ಎಂದು ಜನ ಚಿಂತೆಗೀಡಾಗಿದ್ದಾರೆ. ಇತ್ತ ಅಧಿಕಾರಿಗಳು ಸಹ ಬೇರೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿಲ್ಲ. ಜನರೇಟರ್ ಆಗಲಿ, ಸೋಲಾರ್ ವ್ಯವಸ್ಥೆ ಆಗಲಿ ಯಾವುದೂ ಮಾಡಿಲ್ಲ. ಇದರಿಂದ ಬೇರೆ ಊರಿಂದ, ದೂರದ ಏರಿಯಾಗಳಿಂದ ಬರುವ ಬಡಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಇನ್ನು ಈ ಸಂಬಂಧ ಆಯುಕ್ತ ರಮೇಶ್ ಜಾಧವ್ ಅವರನ್ನಾದರೂ ಕೇಳೋಣ ಅಂದರೆ ಅವರೂ ಸಹ ಕಚೇರಿಗೆ ಬಂದಿರಲಿಲ್ಲಾ. ಹೀಗಾಗಿ ಯಾರನ್ನ ಕೇಳೋಣ ಎಂದು ಜನರು ಪ್ರಶ್ನಿಸುತ್ತಿದ್ದಾರೆ.