ಗದಗ: ಮಲಪ್ರಭಾ ನದಿಯ ಪ್ರವಾಹಕ್ಕೆ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಬಳಿಯ ರಾಷ್ಟ್ರೀಯ ಹೆದ್ದಾರಿ 218 ಕ್ಕೆ ಹಾನಿಯಾಗಿದ್ದು, ಸಂಚಾರ ಬಂದ್ ಆಗಿದೆ.
ಹುಬ್ಬಳ್ಳಿ-ವಿಜಯಪುರ ಮೂಲಕ ಸೊಲ್ಲಾಪುರಕ್ಕೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯಲ್ಲಿ ಕೊಣ್ಣೂರು ಬಳಿ ಸುಮಾರು 400 ಮೀಟರ್ ರಸ್ತೆ ಹಾಳಾಗಿದೆ. ಕಳೆದ ವರ್ಷ ಪ್ರವಾಹಕ್ಕೆ ಈ ರಸ್ತೆ ಕೊಚ್ಚಿ ಹೋಗಿತ್ತು. ಈ ಬಾರಿಯೂ ಅದೇ ರೀತಿ ಆಗಿದೆ.
ಇದನ್ನೂ ಓದಿ : ಮಲಪ್ರಭಾ ನದಿ ಅಬ್ಬರ: ನೂರಾರು ಕುಟುಂಬಗಳು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ
ಪ್ರವಾಹ ಬಂದಾಗಲೆಲ್ಲಾ ರಸ್ತೆಯ ಪರಿಸ್ಥಿತಿ ಇದೇ ರೀತಿ ಆಗುತ್ತಿದೆ. ಕಳೆದ ಬಾರಿ ಪ್ರವಾಹ ಬಂದಾಗ ರಸ್ತೆ ಹಾಳಾಗಿತ್ತು. ಈ ವೇಳೆ ಶಾಶ್ವತ ಮೇಲ್ಸೇತುವೆ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದರು. ಆಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸರ್ಕಾರಕ್ಕೆ ಎರಡೂವರೆ ಕೋಟಿ ರೂಪಾಯಿಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರ ಕೇವಲ 98 ಲಕ್ಷ ರೂಪಾಯಿ ಬಿಡುಗಡೆ ಮಾಡಿತ್ತು. ಇದರಿಂದ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿತ್ತು. ಈ ವರ್ಷ ಮತ್ತೆ ಪ್ರವಾಹ ಬಂದು ರಸ್ತೆ ಕೊಚ್ಚಿ ಹೋಗಿದೆ. ಕಳೆದ ವರ್ಷ ವ್ಯಯಿಸಿದ ಲಕ್ಷಾಂತರ ಈಗ ನೀರಿನಲ್ಲಿ ಕೊಚ್ಚಿ ಹೋದಂತಾಗಿದೆ.