ಧಾರವಾಡ: ಗಣೇಶ ಹಬ್ಬಕ್ಕೆ ಡಿ ಜೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಡಿಜೆಗೆ ಅನುಮತಿ ಪಡೆಯೊಲ್ಲ ಎಂಬ ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್ ಡಿಜೆ ಬಗ್ಗೆ ನೀಡಿರುವ ಹೇಳಿಕೆ ಮಾತನಾಡಿ, ಡಿಜೆ ಬಗ್ಗೆ ಯಾರು ಏನೇ ಹೇಳಿರಲಿ, ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ ಎಂದು ಹೇಳಿದರು.
ಈಗಾಗಲೇ ಪೊಲೀಸರು ಡಿಜೆ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ. ಅದು ಕ್ರಮ ತೆಗೆದುಕೊಳ್ಳುತ್ತೇವೆ ಅಂತಲ್ಲ, ಎಂದು ಮನವಿ ಮಾಡಿಕೊಂಡಿದ್ದಾರೆ. ಸುಪ್ರೀಂಕೋರ್ಟ್ ಮಾರ್ಗಸೂಚಿ ಹಿನ್ನೆಲೆ ಮನವಿ ಮಾಡಿದ್ದಾರೆ. ಇತಿಮಿತಿಯಲ್ಲಿ ಮಾಡಿ ಅಂತಾ ಪೊಲೀಸರು ಹೇಳಿದ್ದಾರೆ. ಇದಕ್ಕೆ ಪರಿಹಾರದ ದಾರಿ ಇದೆಯಾ? ನೋಡುತ್ತೇವೆ ಎಂದರು.
ಶಾಂತಿ ಸೌಹಾರ್ದತೆಯಿಂದ ಹಬ್ಬ ಮಾಡಬೇಕಿದೆ. ಮೂರು ವರ್ಷದ ಬಳಿಕ ಹಬ್ಬಕ್ಕೆ ಅವಕಾಶ ಸಿಕ್ಕಿದೆ. ಹೀಗಾಗಿ ಶಾಂತಿ, ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದವರೊಂದಿಗೆ ಸಭೆ ಮಾಡುತ್ತೇವೆ. ಈ ಸಮಸ್ಯೆಗೆ ಒಂದು ಪರಿಹಾರ ಹುಡುಕುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಮೂರು ವರ್ಷದ ಅವಧಿ ನಮ್ಮಲ್ಲಿ ಇರುತ್ತದೆ: ಬಿಜೆಪಿ ರಾಜ್ಯಾಧ್ಯಕ್ಷರು ಬದಲಾಗುತ್ತಾರೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಬದಲಾವಣೆ ಬರುತ್ತೆ ಅಂತಾ ಮಾಧ್ಯಮಗಳು ಹೇಳುತ್ತಿವೆ. ಸಾಮಾನ್ಯವಾಗಿ ರಾಜ್ಯಾಧ್ಯಕ್ಷರಿಗೆ ಮೂರು ವರ್ಷ ಅವಧಿ ನಮ್ಮಲ್ಲಿ ಇರುತ್ತದೆ. ಆದರೆ, ಮೂರು ವರ್ಷದ ಬಳಿಕ ಬದಲಾವಣೆ ಮಾಡಲೇಬೇಕು ಅಂತಿಲ್ಲ ಎಂದರು.
ಯಾವುದೇ ಚರ್ಚೆ ಆಗಿಲ್ಲ: ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಮಾಧ್ಯಮಗಳೇ ಬದಲಾವಣೆ ಅಂತಾ ಹೇಳುತ್ತಿವೆ. ಆದ್ರೆ ನಮ್ಮಲ್ಲಿ ಆ ರೀತಿ ಯಾವುದೇ ಚರ್ಚೆ ಆಗಿಲ್ಲ ಎಂದು ಹೇಳಿದರು.
ನಾಯಕರ ಭೇಟಿಗೆ ಹೋಗಿದ್ದರು: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ದೆಹಲಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಡಿಯೂರಪ್ಪ ಈಗ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರು, ಅವರು ಪಕ್ಷದ ಹಿರಿಯರಲ್ಲೊಬ್ಬರು. ತಮ್ಮ ನೇಮಕದ ಹಿನ್ನೆಲೆ ಪ್ರಮುಖ ನಾಯಕರ ಭೇಟಿಗೆ ಹೋಗಿದ್ದರು ಎಂದು ಉತ್ತರಿಸಿದರು.
ಓದಿ: ಮೈ ಶುಗರ್ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಕ್ರಮ : ಶಂಕರ್ ಬಿ ಪಾಟೀಲ್ ಮುನೇನಕೊಪ್ಪ