ಹುಬ್ಬಳ್ಳಿ: ಕೋವಿಡ್ ಬಗ್ಗೆ ಜನರು ಭಯಪಡದೇ ಜನರು ಜಾಗೃತರಾಗಬೇಕು. ರೆಮ್ಡಿಸಿವರ್ ವ್ಯಾಕ್ಸಿನ್ ಅಂತಿಮ ಪರಿಹಾರವಲ್ಲ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಕೋವಿಡ್ ರೋಗಿಗಳಿಗಾಗಿ ವಿಶೇಷ ಹೆಚ್ಚುವರಿ 10 ಆ್ಯಂಬುಲೆನ್ಸ್ ಸಿದ್ಧಪಡಿಸಲಾಗಿದೆ. ಜನರು ಜಾಗೃತರಾಗಿರಬೇಕು, ಆದರೇ ಭಯಪಡುವ ಅಗತ್ಯವಿಲ್ಲ. ಅನಗತ್ಯವಾಗಿ ಜನರು ರಸ್ತೆಯಲ್ಲಿ ಓಡಾಡುವುದು ಬೇಡ. ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಅನಿರೀಕ್ಷಿತವಾಗಿ ಬಂದ ಈ ತುರ್ತು ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕಿದೆ ಎಂದು ಅವರು ಹೇಳಿದರು.
ಜನರು ಅಗತ್ಯಕ್ಕಿಂತಲೂ ಹೆಚ್ಚು ಭಯ ಭೀತಿಗೆ ಒಳಗಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಅಗತ್ಯ ವ್ಯಾಕ್ಸಿನ್ ಪೂರೈಸುತ್ತಿದೆ. ರೆಮ್ಡಿಸಿವರ್ ಅಂತಿಮ ಪರಿಹಾರವಲ್ಲ. ರೆಮ್ಡಿಸಿವರ್ ಕೊರತೆಯಾಗಿದೆ ಎಂದು ಗಾಬರಿ ಹುಟ್ಟಿಸುವ ಕೆಲಸವಾಗುತ್ತಿದೆ ಎಂದರು.
ದೊಡ್ಡ ನಗರಗಳಲ್ಲಿ ಆಕ್ಸಿಜನ್ ಕೊರತೆಯಾಗಿರುವುದು ನಿಜ. ಆದರೇ ಏರ್ ಲಿಫ್ಟಿಂಗ್, ರೈಲ್ವೆ ಮೂಲಕ ಆಕ್ಸಿಜನ್ ಪೂರೈಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಕರ್ನಾಟಕದ ವಿಚಾರದಲ್ಲೂ ಕೇಂದ್ರ ಮುತುವರ್ಜಿ ವಹಿಸಿದೆ. ಆರೋಗ್ಯ ಸಚಿವರು ನಿರಂತರ ಸಂರ್ಪಕದಲ್ಲಿದ್ದಾರೆ. ಬಳ್ಳಾರಿಯಿಂದ ಪೂರೈಕೆಯಾಗುವ ಆಕ್ಸಿಜನ್ ಬಗ್ಗೆ ಮಾತುಕತೆ ನಡೆದಿದೆ. ಆಕ್ಸಿಜನ್ ಸಿಗುವುದಿಲ್ಲ ಎಂದು ಯಾರು ಭಯಪಡಬೇಡಿ. ಇಂದಿನಿಂದ ಕೇಂದ್ರ ಸರ್ಕಾರ, ರಾಜ್ಯಕ್ಕೆ ಆಕ್ಸಿಜನ್ ಹಂಚಿಕೆಯನ್ನು ಹೆಚ್ಚಿಸಿದೆ. ದೇಶದ 80 ಕೋಟಿ ಕುಟುಂಬಗಳಿಗೆ ಎರಡು ತಿಂಗಳು ಉಚಿತ ಪಡಿತರ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.