ಧಾರವಾಡ : ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿಗೊಳಿಸಿದ ಪರಿಣಾಮವಾಗಿ ಅವರ ಕೆಲಸದ ಸ್ಥಳಗಳಲ್ಲಿಯೇ ಸ್ಥಗಿತವಾಗಿರುವ ಹೊರ ರಾಜ್ಯಗಳ ವಲಸೆ ಕಾರ್ಮಿಕರು, ಪ್ರವಾಸಿಗರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳನ್ನು ಅವರ ಸ್ವಂತ ಸ್ಥಳಗಳಿಗೆ ಕಳುಹಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳುತ್ತಿದೆ ಎಂದು ಡಿಸಿ ದೀಪಾ ಚೋಳನ್ ತಿಳಿಸಿದರು.
ಹೊರ ರಾಜ್ಯಗಳಿಗೆ ತೆರಳಲು ಬಯಸುವವರ ನೋಂದಣಿ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಹತ್ತಿರದ ಗ್ರಾಮ ಪಂಚಾಯತ್, ತಹಶೀಲ್ದಾರ್ ಕಚೇರಿ, ಪೊಲೀಸ್ ಠಾಣೆ, ಮಹಾನಗರ ಪಾಲಿಕೆ ವಲಯ ಕಚೇರಿಗಳು ಅಥವಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖುದ್ದಾಗಿ ಅಥವಾ ಸಹಾಯವಾಣಿ ವಾಟ್ಸ್‌ಆ್ಯಪ್ ಸಂಖ್ಯೆಗಳ ಮೂಲಕ ಕೂಡಲೇ ತಮ್ಮ ಹೆಸರು ವಿವರಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯವಾಣಿ ಸಂಖ್ಯೆ 1077 ಅಥವಾ ಮೊಬೈಲ್ ವಾಟ್ಸ್‌ಆ್ಯಪ್ ಸಂಖ್ಯೆಗಳಾದ 9449847646 ಅಥವಾ 9449847641 ಮೂಲಕ ಯಾವ ರಾಜ್ಯಕ್ಕೆ ಹೋಗಬೇಕು ಎಂಬ ಮಾಹಿತಿ ನೀಡಿ, ನೋಂದಣಿ ಮಾಡಿಕೊಳ್ಳಬಹುದು. ಹೊರ ರಾಜ್ಯಗಳಿಗೆ ತೆರಳ ಬಯಸುವವರಿಗೆ ಜಿಲ್ಲಾಡಳಿತ ವಾಹನ ವ್ಯವಸ್ಥೆ ಮಾಡಲಿದೆ. ಇದಕ್ಕೆ ತಗಲುವ ವೆಚ್ಚವನ್ನು ಆಯಾ ಪ್ರಯಾಣಿಕರೆ ಭರಿಸಬೇಕು. ಕಡಿಮೆ ಸಂಖ್ಯೆಯ ಪ್ರಯಾಣಿಕರು ಇದ್ದರೆ ಪ್ರತ್ಯೇಕ ಕಾರು, ಮಿನಿ ವಾಹನಗಳ ಮೂಲಕ ಹೋಗಲು ಅನುಮತಿ ನೀಡಲಾಗುವುದು ಎಂದರು.
ಸರ್ಕಾರದ ಮಾರ್ಗಸೂಚಿಗಳು ಬಂದ ಕೂಡಲೇ ಹೊರ ರಾಜ್ಯದ ವಲಸೆ ಕಾರ್ಮಿಕರು, ಪ್ರವಾಸಿಗರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳನ್ನು ಕಳುಹಿಸಿ ಕೊಡಲಾಗುವುದು. ಧಾರವಾಡ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ನೆಲೆಸಿರುವ ಹೊರ ರಾಜ್ಯಗಳ ಜನರು ತಮ್ಮ ಮಾಹಿತಿಯನ್ನು ನೋಂದಣಿ ಮಾಡಿಕೊಂಡ್ರೆ, ಸಂಬಂಧಿಸಿದ ರಾಜ್ಯಗಳಿಗೆ ಈ ಕುರಿತು ಅಧಿಕೃತ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.